‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ರಿಯಲ್ ಕಹಾನಿ; ಟ್ರೇಲರ್ನಲ್ಲಿ ಅಕ್ಷಯ್ ಕುಮಾರ್ ಅಬ್ಬರ
ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕುರಿತು ‘ಕೇಸರಿ: ಚಾಪ್ಟರ್ 2’ ಸಿನಿಮಾ ಮಾಡಲಾಗಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಅಕ್ಷಯ್ ಕುಮಾರ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆರ್. ಮಾಧವನ್, ಅನನ್ಯಾ ಪಾಂಡೆ ಕೂಡ ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.

ರಿಯಲ್ ಘಟನೆಗಳನ್ನು ಆಧರಿಸಿದ ಸಿನಿಮಾಗಳನ್ನು ಮಾಡಿ ಅಕ್ಷಯ್ ಕುಮಾರ್ ಅವರು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಕೆಲವು ಸಿನಿಮಾಗಳಿಂದ ಅವರು ಸೋಲು ಅನುಭವಿಸಿದ್ದು ಕೂಡ ಇದೆ. ಹಾಗಿದ್ದರೂ ಕೂಡ ಅವರ ಉತ್ಸಾಹ ಕುಗ್ಗಿಲ್ಲ. ಮತ್ತೆ ಅವರೊಂದು ನೈಜ ಘಟನೆ ಆಧಾರಿತ ಸಿನಿಮಾ ಮೂಲಕ ಜನರನ್ನು ರಂಜಿಸಲು ಬರುತ್ತಿದ್ದಾರೆ. ಹೌದು, ಏಪ್ರಿಲ್ 18ರಂದು ಬಿಡುಗಡೆ ಆಗಲಿರುವ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ರಿಯಲ್ ಕಹಾನಿ ಇದೆ. ಈ ಸಿನಿಮಾದ ಟ್ರೇಲರ್ ಇಂದು (ಏಪ್ರಿಲ್ 3) ಬಿಡುಗಡೆ ಆಗಿದೆ. ಟ್ರೇಲರ್ ನೋಡಿದ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಘಟನೆಯನ್ನು ಆಧರಿಸಿ ‘ಕೇಸರಿ: ಚಾಪ್ಟರ್ 2’ ಸಿನಿಮಾ ಮೂಡಿಬಂದಿದೆ.
ಕರಣ್ ಸಿಂಗ್ ತ್ಯಾಗಿ ಅವರು ‘ಕೇಸರಿ: ಚಾಪ್ಟರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹೀರೂ ಯಶ್ ಜೋಹರ್, ಅರುಣಾ ಭಾಟಿಯಾ, ಕರಣ್ ಜೋಹರ್, ಆಧಾರ್ ಪೂನಾವಾಲ ಮುಂತಾದವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಕ್ಷಯ್ ಕುಮಾರ್, ಆರ್. ಮಾಧವನ್, ಅನನ್ಯಾ ಪಾಂಡೆ ಮುಂತಾದ ಕಲಾವಿದರು ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
1919ರ ಏಪ್ರಿಲ್ 13ರಂದು ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆಯಿತು. ಬ್ರಿಟಿಷ್ ಸರ್ಕಾರದ ಈ ಕೃತ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ಲಾಯರ್ ಶಂಕರನ್ ನಾಯರ್ ಕುರಿತು ‘ಕೇಸರಿ: ಚಾಪ್ಟರ್ 2’ ಸಿನಿಮಾ ಮೂಡಿಬಂದಿದೆ. ಶಂಕರನ್ ನಾಯರ್ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ. ಕೋರ್ಟ್ನಲ್ಲಿನ ವಾದ-ಪ್ರತಿವಾದದ ದೃಶ್ಯಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿವೆ.
‘ಕೇಸರಿ: ಚಾಪ್ಟರ್ 2’ ಸಿನಿಮಾ ಟ್ರೇಲರ್:
ಅಕ್ಷಯ್ ಕುಮಾರ್ ಅವರು ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. 2025ರ ಆರಂಭದಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು. ಹಾಗಾಗಿ ಅವರಿಗೆ ತುರ್ತಾಗಿ ಒಂದು ಗೆಲುವಿನ ಅವಶ್ಯಕತೆ ಇದೆ. ‘ಕೇಸರಿ: ಚಾಪ್ಟರ್ 2’ ಸಿನಿಮಾ ಮೂಲಕ ಗೆಲುವು ಕಾಣುವ ನಿರೀಕ್ಷೆಯಲ್ಲಿ ಅವರು ಇದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಶಿವಲಿಂಗ ತಬ್ಬಿಕೊಂಡಿದ್ದಕ್ಕೆ ಕಿರಿಕ್; ಸ್ಪಷ್ಟನೆ ನೀಡಿದ ನಟ
ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಕೂಡ ‘ಕೇಸರಿ: ಚಾಪ್ಟರ್ 2’ ಸಿನಿಮಾದ ಟ್ರೇಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಭಗತ್ ಸಿಂಗ್ ಯುದ್ಧ ಬೀದಿಯಲ್ಲಿ ನಡೆಯಿತು. ಈ ಯುದ್ಧ ನಡೆದಿದ್ದು ಕೋರ್ಟ್ನಲ್ಲಿ. ಇಬ್ಬರೂ ಇತಿಹಾಸ ಬದಲಿಸಿದರು. ಟ್ರೇಲರ್ ಅತ್ಯುತ್ತಮವಾಗಿದೆ. ಅಕ್ಷಯ್ ಕುಮಾರ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ’ ಎಂದು ಅಕ್ಷಯ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.