ಇತ್ತೀಚೆಗೆ ರಿಲೀಸ್ ಆದ ಅಕ್ಷಯ್ ಕುಮಾರ್ (Akshay Kumar) ನಟನೆಯ ಬಹುತೇಕ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ. ಇದಕ್ಕೆ ಕಾರಣ ಹಲವು. ಆದಾಗ್ಯೂ ಅಕ್ಷಯ್ ಕುಮಾರ್ಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಇದರ ಜೊತೆಗೆ ಅವರು ತೋರುತ್ತಿರುವ ಉತ್ಸಾಹವೂ ಕುಗ್ಗಿಲ್ಲ. ಅಕ್ಷಯ್ ಕುಮಾರ್ ಅವರು ಸಾಲು ಸಾಲು ಫ್ಲಾಪ್ ನೀಡಿರುವುದರ ಬಗ್ಗೆ ಮಾತನಾಡಿದ್ದಾರೆ. ಅವರ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದರ ಪ್ರಚಾರದಲ್ಲಿ ಭಾಗಿ ಆಗುತ್ತಿರುವ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಹಾಗೂ ‘ಮಿಷನ್ ರಾಣಿಗಂಜ್’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಎನಿಸಿಕೊಂಡವು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ಮಾಡುತ್ತೇನೆ. ಒಂದೇ ವರ್ಗದ ಸಿನಿಮಾಗೆ ಕಟ್ಟು ಬೀಳುವವನು ನಾನಲ್ಲ. ಬೇರೆ ಬೇರೆ ವರ್ಗದ ಚಿತ್ರಗಳನ್ನು ಮಾಡುವುದು ನನಗಿಷ್ಟ. ಅದು ಯಶಸ್ಸು ಕಾಣಲಿ ಅಥವಾ ಕಾಣದೆ ಇರಲಿ, ನಾನು ಕೆಲಸ ಮಾಡುವುದೇ ಹೀಗೆ. ಕೆಲವು ಸಾಮಾಜಿಕ ಸಿನಿಮಾ, ಕೆಲವು ಒಳ್ಳೆಯ ಕಥೆ ಇರುವ ಸಿನಿಮಾ, ಕೆಲವು ಕಾಮಿಡಿ, ಕೆಲವು ಆ್ಯಕ್ಷನ್ ಸಿನಿಮಾ ಮಾಡುತ್ತಿರುತ್ತೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್
‘ನಾನು ವಿವಿಧ ಬಗೆಯ ಸಿನಿಮಾಗಳನ್ನು ಮಾಡಲು ಇಷ್ಟಪಡುತ್ತೇನೆ. ಈಗ ಕಾಮಿಡಿ ಹಾಗೂ ಆ್ಯಕ್ಷನ್ ಸಿನಿಮಾಗಳನ್ನೇ ಜನರು ಹೆಚ್ಚು ನೋಡುತ್ತಾರೆ ಎಂದು ಕೆಲವರು ಹೇಳಿದ್ದಿದೆ. ಹಾಗಂದ ಮಾತ್ರಕ್ಕೆ ನಾನು ಅವುಗಳನ್ನೇ ಮಾಡಬೇಕು ಎಂದಿಲ್ಲ. ಟಾಯ್ಲೆಟ್: ಏಕ್ ಪ್ರೇಮ್ ಕಥಾ, ಏರ್ಲಿಫ್ಟ್, ರುಸ್ತುಂ ಸಿನಿಮಾ ಸೇರಿ ಅನೇಕ ಸಾಮಾಜಿಕ ಕಥೆಯ ಸಿನಿಮಾ ಮಾಡಿದ್ದೇನೆ. ಕೆಲವೊಮ್ಮೆ ಯಶಸ್ಸು ಸಿಗುತ್ತದೆ, ಕೆಲವೊಮ್ಮೆ ಸಿಗಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಬದುಕುವ ಸಾಧ್ಯತೆ ಶೇ.30 ಮಾತ್ರ’: ಇದು ಅಕ್ಷಯ್ ಕುಮಾರ್ ಜೀವನದ ಅಪಾಯಕಾರಿ ಸ್ಟಂಟ್
‘ಇದು ನಾನು ನೋಡದೇ ಇರುವುದೇನು ಅಲ್ಲ. ಈ ಮೊದಲು ನನ್ನ 16 ಸಿನಿಮಾಗಳು ಸತತವಾಗಿ ಫ್ಲಾಪ್ ಆಗಿದ್ದವು. ಆದರೂ ನಾನು ಸಿನಿಮಾ ಮಾಡಿದೆ. ಈ ಚಿತ್ರಕ್ಕಾಗಿ (ಬಡೇ ಮಿಯಾ ಚೋಟೆ ಮಿಯಾ) ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಈ ಸಿನಿಮಾ ನಮಗೆ ಅದೃಷ್ಟ ತರುತ್ತದೆ ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ