ಎಷ್ಟೇ ಪ್ರಚಾರ ಮಾಡಿದ್ರೂ ಮಂಕಾಗಿದೆ ‘ಸಾಮ್ರಾಟ್ ಪೃಥ್ವಿರಾಜ್’ ಕಲೆಕ್ಷನ್; 2ನೇ ದಿನದ ಗಳಿಕೆ ಎಷ್ಟು?
Samrat Prithviraj Collection: ದೇಶಭಕ್ತಿ ಕಥಾಹಂದರ ಹೊಂದಿರುವ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗಿದೆ. ಆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ.
ಬಣ್ಣದ ಲೋಕ ಒಂದು ಮಾಯೆ. ಯಾವ ಸಿನಿಮಾ ಗೆಲ್ಲುತ್ತದೆ, ಯಾವ ಸಿನಿಮಾ ಸೋಲುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ (Samrat Prithviraj) ವಿಚಾರದಲ್ಲೂ ಹಾಗೆಯೇ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲಿದೆ ಎಂದೇ ಊಹಿಸಲಾಗಿತ್ತು. ಆದರೆ ಆಗುತ್ತಿರುವುದೇ ಬೇರೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಮಾಯಿ ಮಾಡುವಲ್ಲಿ ವಿಫಲವಾಗಿದೆ. ಮೊದಲ ದಿನವಾದ ಜೂನ್ 3ರಂದು 10.70 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ ಗಳಿಕೆ ಗಣನೀಯವಾಗಿ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೇವಲ 12.60 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ (Box Office Collection) ಆಗಿದೆ. ಅಕ್ಷಯ್ ಕುಮಾರ್ ರೀತಿಯ ಸ್ಟಾರ್ ನಟನ ಚಿತ್ರಕ್ಕೆ ಇದು ಹೇಳಿಕೊಳ್ಳುವಂತಹ ಮೊತ್ತ ಅಲ್ಲ ಎಂಬುದು ಟ್ರೇಡ್ ಅನಲಿಸ್ಟ್ಗಳ ಅಭಿಪ್ರಾಯ.
ದೇಶಭಕ್ತಿ ಕಥಾಹಂದರ ಹೊಂದಿರುವ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಅನೇಕರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿಲ್ಲ.
ಇದನ್ನೂ ಓದಿ: ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್ ಕುಮಾರ್ ರೀತಿ ಡೈಲಾಗ್ ಹೊಡೆದ ಅಮಿತ್ ಶಾ
ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರ ಇಮೇಜ್ಗೆ ಕೊಂಚ ಧಕ್ಕೆ ಆಗಿದೆ. ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಅವರು ಈ ಹಿಂದೆ ನೀಡಿದ್ದ ಕೆಲವು ಕೇಳಿಕೆಗಳನ್ನು ಇಟ್ಟುಕೊಂಡು ಕೂಡ ಈ ಟೀಕೆ ಮಾಡಲಾಗುತ್ತಿದೆ. ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ನಾಯಕ-ನಾಯಕಿ ನಡುವೆ ವಯಸ್ಸಿನ ಅಂತರ ಹೆಚ್ಚಿದೆ ಎಂಬ ಕಾರಣದಿಂದಲೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲದರ ಪರಿಣಾಮದಿಂದಲೂ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗೆ ಹಿನ್ನೆಡೆ ಆಗಿರಬಹುದು.
ಇದನ್ನೂ ಓದಿ: ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್ ಕುಮಾರ್; ಇದು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು
#SamratPrithviraj witnesses limited growth on Day 2… Metros – which contribute a major chunk of revenue – remain low… Mass circuits are strong… A big push on Day 3 is a must for a healthy weekend total… Fri 10.70 cr, Sat 12.60 cr. Total: ₹ 23.30 cr. #India biz. pic.twitter.com/NMTKGIWIrK
— taran adarsh (@taran_adarsh) June 5, 2022
ಭಾನುವಾರ (ಜೂನ್ 5) ಕಲೆಕ್ಷನ್ನಲ್ಲಿ ಗಮನಾರ್ಹವಾಗಿ ಏರಿಕೆ ಆಗಲೇ ಬೇಕಿದೆ. ಇಲ್ಲದಿದ್ದರೆ ಈ ಸಿನಿಮಾದ ಲೈಫ್ ಟೈಮ್ ಗಳಿಕೆ ಕುಸಿಯಲಿದೆ. ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ‘ವಿಕ್ರಮ್’ ಸಿನಿಮಾ ಭರ್ಜರಿ ಪೈಪೋಟಿ ನೀಡುತ್ತಿದೆ. ಅತ್ತ, ಬಾಲಿವುಡ್ನಲ್ಲಿ ‘ಭೂಲ್ ಭುಲಯ್ಯ 2’ ಸಿನಿಮಾ ಕೂಡ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದು ಕೂಡ ‘ಸಾಮ್ರಾಟ್ ಪೃಥ್ವಿರಾಜ್’ ಕಲೆಕ್ಷನ್ ತಗ್ಗಲು ಕಾರಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:39 pm, Sun, 5 June 22