ಬಿಡುಗಡೆಗೂ ಮನ್ನವೇ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಈಗೊಂದು ಬಂಪರ್ ಕೊಡುಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಅವರು ಟ್ಯಾಕ್ಸ್ ಫ್ರೀ ಆದೇಶ ಹೊರಡಿಸಿದ್ದಾರೆ. ಲಖನೌನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಬುಧವಾರ (ಜೂನ್ 1) ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಕೂಡ ಈ ಸಿನಿಮಾವನ್ನು ನೋಡಿದ್ದಾರೆ.
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಯೋಗಿ ಆದಿತ್ಯನಾಥ್ ಮೆಚ್ಚಿಕೊಂಡಿದ್ದಾರೆ. ಇಡೀ ತಂಡದ ಪ್ರಯತ್ನವನ್ನು ಅವರು ಹೊಗಳಿದ್ದಾರೆ. ‘ಅಕ್ಷಯ್ ಕುಮಾರ್ ಅವರು ಭಾರತದ ಇತಿಹಾಸವನ್ನು ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಹಾಗಾಗಿ ಈ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಹಿಂದೆ ಕೂಡ ದೇಶಭಕ್ತಿ ಕಥಾಹಂದರ ಇರುವಂತಹ ಸಿನಿಮಾಗಳನ್ನು ಮಾಡಿ ಅಕ್ಷಯ್ ಕುಮಾರ್ ಸೈ ಎನಿಸಿಕೊಂಡಿದ್ದರು. ಈ ಬಾರಿ ಅವರು ‘ಸಾಮ್ರಾಟ್ ಪೃಥ್ವಿರಾಜ್’ ಮೂಲಕ ಐತಿಹಾಸಿಕ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ. ಜೂನ್ 3ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸೋನು ಸೂದ್, ಸಂಜಯ್ ದತ್ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.
ಇದನ್ನೂ ಓದಿ: ‘ಪೃಥ್ವಿರಾಜ್’ ಟ್ರೇಲರ್ನಲ್ಲಿ ಮಿಂಚಿದ ಅಕ್ಷಯ್ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್?
‘ಸಾಮ್ರಾಟ್ ಪೃಥ್ವಿರಾಜ್’ ಬಗ್ಗೆ ಅಮಿತ್ ಶಾ ಮೆಚ್ಚುಗೆ:
‘ಇತಿಹಾಸದ ವಿದ್ಯಾರ್ಥಿ ಆದ ನಾನು ಈ ಸಿನಿಮಾ ನೋಡಿ ಕೇವಲ ಎಂಜಾಯ್ ಮಾಡಲಿಲ್ಲ. ಭಾರತೀಯರಿಗೆ ಈ ಚಿತ್ರ ಎಷ್ಟು ಮುಖ್ಯ ಎಂಬುದನ್ನು ಕೂಡ ಅರ್ಥ ಮಾಡಿಕೊಂಡೆ. ಸುಮಾರು 13 ವರ್ಷಗಳ ಬಳಿಕ ನಾನು ನನ್ನ ಕುಟುಂಬದವರ ಜೊತೆ ಕುಳಿತು ಸಿನಿಮಾ ನೋಡಿದೆ. ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಥಿಯೇಟರ್ನ ಕೊನೇ ಸಾಲಿನಲ್ಲಿ ನಾವು ಕುಳಿತಿದ್ದೆವು. ನಮ್ಮ ಕುಟುಂಬಕ್ಕೆ ಇದು ಸ್ಪೆಷಲ್ ದಿನ’ ಎಂದು ಅಮಿತ್ ಶಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Thu, 2 June 22