
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಹಾಕಾವ್ಯ ಆಧಾರಿತ ಚಿತ್ರದ ಮೇಲೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ಮುಂಬೈನ ಲೋವರ್ ಪರೇಲ್ನಲ್ಲಿರುವ ಐಮ್ಯಾಕ್ಸ್ ಥಿಯೇಟರ್ನಲ್ಲಿ ಸಿನಿಮಾ ತಾರೆಯರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಅವರನ್ನು ಹುರಿದುಂಬಿಸಲು ಅವರ ಕುಟುಂಬಸ್ಥರು ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
ಈ ಪ್ರೀಮಿಯರ್ ಶೋಗೆ ನಟಿ ಆಲಿಯಾ ಭಟ್ ಹಾಗೂ ಅತ್ತೆ ನೀತು ಕಪೂರ್ ಜೊತೆಯಾಗಿ ಆಗಮಿಸಿ ಎಲ್ಲರ ಗಮನ ಸೆಳೆದರು. ಆಲಿಯಾ ಭಟ್ ನೀಲಿ ಬಣ್ಣದ ಸೀರೆಯಲ್ಲಿ ಅತ್ಯಂತ ಸುಂದರವಾಗಿ ಕಂಗೊಳಿಸಿದರು. ನೀತು ಕಪೂರ್ ಬ್ರೌನ್ ಬಣ್ಣದ ಮಾಡರ್ನ್ ಉಡುಪಿನಲ್ಲಿ ಮಿಂಚಿದರು. ರಣಬೀರ್ ಕಪೂರ್ ಕೂಡ ಮರೂನ್ ಕುರ್ತಾ ಧರಿಸಿ ಮಿಂಚಿದರು.
ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಶ್ವೇತವರ್ಣದ ಸೂಟ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಆಗಮಿಸಿದರು. ಈ ವೇಳೆ ಲಕ್ಷ್ಮಣನ ಪಾತ್ರ ಮಾಡಿರುವ ರವಿ ದುಬೆ ಅವರು ಸನ್ನಿ ಡಿಯೋಲ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ರವಿ ದುಬೆ ಅವರ ಈ ಗೌರವದ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಪ್ರೀಮಿಯರ್ ಪ್ರದರ್ಶನದಲ್ಲಿ ಸಿನಿಮಾದ ಇತರ ಪ್ರಮುಖ ನಟರಾದ ವಿವೇಕ್ ಒಬೆರಾಯ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಹಾಗೂ ಲಾರಾ ದತ್ತ ತಮ್ಮ ಕುಟುಂಬಸ್ಥರೊಂದಿಗೆ ಭಾಗವಹಿಸಿದ್ದರು. ನಿರ್ದೇಶಕ ನಿತೇಶ್ ತಿವಾರಿ ಅವರು ಹೆಂಡತಿ ಅಶ್ವಿನ್ ಅಯ್ಯರ್ ತಿವಾರಿ ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದರು.
ಇದನ್ನೂ ಓದಿ: ‘ತಲೆಕೆಡಿಸಿಕೊಳ್ಳಲ್ಲ’; ‘ರಾಮಾಯಣ’ ವಿಮರ್ಶೆ ಮತ್ತು ಟ್ರೋಲಿಂಗ್ಗೆ ರಣಬೀರ್ ಕಪೂರ್ ಉತ್ತರ
ರಣಬೀರ್ ಕಪೂರ್ ಅವರ ಅತ್ತೆ ಸೋನಿ ರಜ್ದಾನ್ ಹಾಗೂ ಆಲಿಯಾ ಸಹೋದರಿ ಶಾಹೀನ್ ಭಟ್ ಕೂಡ ಪ್ರದರ್ಶನಕ್ಕೆ ಸಾಕ್ಷಿಯಾದರು. ರಣಬೀರ್ ಸಹೋದರರಾದ ಆದರ್ ಜೈನ್ ಮತ್ತು ಅರ್ಮಾನ್ ಜೈನ್ ತಮ್ಮ ಪತ್ನಿಯರೊಂದಿಗೆ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.