ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕೆ ಅಟ್ಲಿ ಉತ್ಸುಕರಾಗಿದ್ದರು. ಈ ಚಿತ್ರದ ಬಗ್ಗೆ ಘೋಷಣೆ ಕೂಡ ಆಯಿತು. ಆದರೆ, ನಿರ್ಮಾಪಕರ ಕೆಲವು ಷರತ್ತಿನಿಂದಾಗಿ ಸಿನಿಮಾ ಕೈ ಬಿಡಬೇಕಾದ ಪರಿಸ್ಥಿತಿ ಬಂದಿದೆ. ಈಗ ಇದೇ ಕಥೆಯನ್ನು ಅವರು ಅಲ್ಲು ಅರ್ಜುನ್ಗೆ ನೀಡಲು ಪ್ಲ್ಯಾನ್ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ ಜೊತೆ ಈ ಸಿನಿಮಾ ಮಾಡಿ ಅವರು ಗೆಲುವು ಕಾಣುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಮೊದಲು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ಅಟ್ಲಿ ರೆಡಿ ಆಗಿದ್ದರು. ಕಮಲ್ ಹಾಸನ್ ಅಥವಾ ರಜನಿಕಾಂತ್ ಅವರನ್ನು ಪ್ರಮುಖ ಪಾತ್ರದಲ್ಲಿ ಹಾಕಿಕೊಳ್ಳಲು ಪ್ಲ್ಯಾನ್ ನಡೆದಿತ್ತು. ಆದರೆ, ಇವರಲ್ಲಿ ಒಬ್ಬರನ್ನು ಕರೆತರಲು ಅಟ್ಲಿ ವಿಫಲರಾದರು. ಹೀಗಾಗಿ, ಕಥೆ ಬದಲಿಸುವಂತೆ ಸನ್ ಪಿಕ್ಚರ್ಸ್ ಸಂಸ್ಥೆ ಅಟ್ಲಿಗೆ ಸೂಚಿಸಿತ್ತು. ಇದಕ್ಕೆ ಒಪ್ಪದೆ ಅಟ್ಲಿ ಹೊರ ಬಂದರು ಎನ್ನಲಾಗಿದೆ.
ಅಟ್ಲಿ ಅವರು ಅಲ್ಲು ಅರ್ಜುನ್ ಜೊತೆಯೂ ಸಿನಿಮಾ ಮಾಡಬೇಕಿದೆ. ಸಲ್ಮಾನ್ ಖಾನ್ ಜೊತೆ ಮಾಡಬೇಕಿದ್ದ ಸಿನಿಮಾದ ಕಥೆಯನ್ನೇ ಅಲ್ಲು ಅರ್ಜುನ್ಗೆ ಅಟ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕಥೆಯನ್ನು ಅಲ್ಲು ಅರ್ಜುನ್ ಕೂಡ ಒಪ್ಪಿದ್ದಾರೆ. ಎಲ್ಲವೂ ಫೈನಲ್ ಆದರೆ ಸಲ್ಮಾನ್ ನಟಿಸಬೇಕಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸೋದು ಫಿಕ್ಸ್ ಆಗಲಿದೆ.
ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ ಎನ್ನಲಾಗಿದೆ. ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಅಲ್ಲು ಅರ್ಜುನ್ ಜೊತೆ ನಟಿಸೋ ಅವಕಾಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
ಹಾಗಾದರೆ ಸಿನಿಮಾಗೆ ಬಂಡವಾಳ ಹೂಡೋದು ಯಾರು? ಅದಕ್ಕೂ ಉತ್ತರ ಇದೆ. ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಈ ಕಾರಣದಿಂದಲೂ ಸನ್ ಪಿಕ್ಚರ್ಸ್ ತಂಡ ಸಲ್ಲು ಸಿನಿಮಾಗೆ ಇಷ್ಟು ದೊಡ್ಡ ಬಂಡವಾಳ ಹೂಡಲು ಭಯಗೊಂಡಿತ್ತು. ಈಗ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನುವಾಗ ತಂಡ ಅವರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.