ದಳಪತಿ ವಿಜಯ್ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿಯ ಸಿಹಿ ಮಾತು
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗವನ್ನು ದಾಟಿ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಹಾಲಿವುಡ್ನಲ್ಲಿ ಅವರಿಗೆ ಒಂದರ ಹಿಂದೊಂದು ಅವಕಾಶಗಳು ಲಭ್ಯವಾಗುತ್ತಿವೆ. ಬಾಲಿವುಡ್, ಹಾಲಿವುಡ್ ಎರಡಲ್ಲೂ ಸ್ಟಾರ್ ಆಗಿರುವ ಪ್ರಿಯಾಂಕಾ ಚೋಪ್ರಾಗೆ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಜೊತೆಗೆ ಆಪ್ತ ನಂಟಿದೆ. ಪ್ರಿಯಾಂಕಾ ಚೋಪ್ರಾರ ತಾಯಿ ಮಧು ಚೋಪ್ರಾ, ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಭಾರತೀಯ ಚಿತ್ರರಂಗವನ್ನು ದಾಟಿ ಹಾಲಿವುಡ್ನಲ್ಲಿ ಹವಾ ಎಬ್ಬಿಸಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾಗೂ, ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ಗೂ ಆಪ್ತ ನಂಟು ಇದೆ. ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾಕ್ಕೆ ದಳಪತಿ ವಿಜಯ್ ನಾಯಕ. 2002 ರಲ್ಲಿ ಬಿಡುಗಡೆ ಆದ ‘ತಮಿಳನ್’ ಸಿನಿಮಾ ಪ್ರಿಯಾಂಕಾ ಚೋಪ್ರಾ ನಟಿಸಿದ ಮೊದಲ ಸಿನಿಮಾ. ಅದಾಗಲೇ ಸ್ಟಾರ್ ನಟರಾಗಿದ್ದ ವಿಜಯ್ ಆ ಸಿನಿಮಾಕ್ಕೆ ನಾಯಕ. ಈಗ ಪ್ರಿಯಾಂಕಾ ಚೋಪ್ರಾ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಪ್ರಿಯಾಂಕಾ ಅವರ ತಾಯಿ ವಿಜಯ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಮೊದಲ ಸಿನಿಮಾದ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಇತ್ತೀಚೆಗೆ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾರ ತಾಯಿ ಮಧು ಚೋಪ್ರಾ, ‘ಮಿಸ್ ವರ್ಲ್ಡ್ ಗೆದ್ದ ಬಳಿಕ ಪ್ರಿಯಾಂಕಾ ಚೋಪ್ರಾಗೆ ಮುಂದೆ ಏನು ಮಾಡಬೇಕು ಎಂಬ ಯೋಚನೆ ಇರಲಿಲ್ಲ. ನಟನೆ ಬಗ್ಗೆ ಆಸಕ್ತಿ ಇರಲಿಲ್ಲ. ‘ತಮಿಳನ್’ ಸಿನಿಮಾ ಅವಕಾಶವನ್ನು ಪ್ರಿಯಾಂಕಾ ನಿರಾಕರಿಸಿಬಿಟ್ಟಿದ್ದರು. ಆ ನಂತರ ‘ತಮಿಳನ್’ ತಂಡದವರು ಪ್ರಿಯಾಂಕಾರ ತಂದೆಯ ಮೂಲಕ ಪ್ರಿಯಾಂಕಾರನ್ನು ಸಿನಿಮಾದಲ್ಲಿ ನಟಿಸಲು ಒಪ್ಪಿಸಿದರು’ ಎಂದಿದ್ದಾರೆ.
‘ಸಿನಿಮಾದ ಶೂಟಿಂಗ್ ಪ್ರಿಯಾಂಕಾ ಪಾಲಿಗೆ ಬಹಳ ಕಷ್ಟದ್ದಾಗಿತ್ತು. ಆಕೆ ಹೊಸ ಭಾಷೆ ಕಲಿತು, ಸಂಭಾಷಣೆ ಹೇಳಬೇಕಿತ್ತು. ಆ ಸಿನಿಮಾಕ್ಕೆ ಪ್ರಭುದೇವ ಸಹೋದರ ರಾಜಸುಂದರಂ ನೃತ್ಯ ನಿರ್ದೇಶಕರಾಗಿದ್ದರು, ಕೆಲವು ಡ್ಯಾನ್ಸ್ ಸ್ಟೆಪ್ಪುಗಳ ಬಹಳ ಕಷ್ಟದ್ದಾಗಿತ್ತು. ಪ್ರಿಯಾಂಕಾಗೆ ಡ್ಯಾನ್ಸ್ ಮಾಡುವುದು ಬಹಳ ಕಷ್ಟವಾಗಿತ್ತು. ಆದರೆ ವಿಜಯ್ ಬಹಳ ತಾಳ್ಮೆ ಪ್ರದರ್ಶಿಸಿದರು. ಪ್ರಿಯಾಂಕಾ ಸಹ ಎಲ್ಲವನ್ನೂ ಬೇಗನೆ ಕಲಿತು, ಕೊನೆ, ಕೊನೆಗೆ ವಿಜಯ್ರಿಂದ ಭೇಷ್ ಎನಿಸಿಕೊಂಡಲು. ಶೂಟಿಂಗ್ ಮುಗಿಯುವ ವೇಳೆಗೆ ವಿಜಯ್ ಸ್ನೇಹವನ್ನು ಪ್ರಿಯಾಂಕಾ ಸಂಪಾದಿಸಿದರು’ ಎಂದಿದ್ದಾರೆ ಮಧು.
ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾಗಾಗಿ ಬೇಲಿ ಹಾರಿ ಮನೆಗೆ ನುಗ್ಗಿದ್ದ ಹುಡುಗ; ಘಟನೆ ವಿವರಿಸಿದ ತಾಯಿ
2021 ರಲ್ಲಿ ಪ್ರಿಯಾಂಕಾ ಚೋಪ್ರಾ ಬರೆದ ತಮ್ಮ ಆಟೋಬಯೋಗ್ರಾಫಿ ‘ಅನ್ಫಿನಿಶ್ಡ್’ನಲ್ಲಿಯೂ ಸಹ ಅವರು ದಳಪತಿ ವಿಜಯ್ ಅವರ ಬಗ್ಗೆ ಬರೆದಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿ ವಿಜಯ್ ತಮಗೆ ನೀಡಿದ ಆತ್ಮವಿಶ್ವಾಸದಿಂದಲೇ ನಾನು ನಟಿಯಾಗಿ ನಿಲ್ಲಲು ಸಾಧ್ಯವಾಯಿತು, ಇಲ್ಲವಾದರೆ ‘ತಮಿಳನ್’ ನನ್ನ ಮೊದಲ ಮತ್ತು ಕೊನೆಯ ಸಿನಿಮಾ ಆಗಿರುತ್ತಿತ್ತು’ ಎಂದು ಸಹ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಮೊದಲ ಸಿನಿಮಾದ ಬಳಿಕ ಯಾವುದೇ ದಕ್ಷಿಣ ಭಾರತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿಲ್ಲ. ಇದೀಗ 23 ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಪ್ರಿಯಾಂಕಾ. ಮಹೇಶ್ ಬಾಬು ನಟಿಸಿ, ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ