ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಈಗ 80 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ಶೂಟಿಂಗ್ ವೇಳೆ ಗಾಯವಾಗಿತ್ತು. ಆದರೆ ಈಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಅದರ ಜೊತೆಗೆ ಒಂದು ಕಿರಿಕ್ ಮಾಡಿಕೊಂಡಿದ್ದಾರೆ. ಮುಂಬೈನ ಬೀದಿಯಲ್ಲಿ ಅವರು ಹೆಲ್ಮೆಟ್ (Helmet) ಇಲ್ಲದೇ ಬೈಕ್ ಸವಾರಿ ಮಾಡಿದ್ದಾರೆ. ಆ ಸಂದರ್ಭದ ಫೋಟೋ ಕೂಡ ವೈರಲ್ ಆಗಿದೆ. ಆದರೆ ಈಗ ಅಮಿತಾಭ್ ಬಚ್ಚನ್ ಅವರು ‘ನಂದೇನೂ ತಪ್ಪಿಲ್ಲ’ ಎಂದು ವಾದಿಸುತ್ತಿದ್ದಾರೆ. ಈ ಫೋಟೋ ಹಿಂದಿನ ಅಸಲಿಯತ್ತು ಏನು ಎಂಬುದನ್ನು ಅಮಿತಾಭ್ ಬಚ್ಚನ್ ವಿವರಿಸಿದ್ದಾರೆ. ಅಷ್ಟಕ್ಕೂ ಅಮಿತಾಭ್ ಬಚ್ಚನ್ ಅವರು ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿದ್ದು ಒಂದು ಶೂಟಿಂಗ್ ಸಲುವಾಗಿ.
ಅಮಿತಾಭ್ ಬಚ್ಚನ್ ಅವರು ಬ್ಲಾಗ್ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಅವರೀಗ ತಮ್ಮ ಹೆಲ್ಮೆಟ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್ ಸಿನಿಮಾದ ಕಾಸ್ಟ್ಯೂಮ್. ಬೈಕ್ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್-ಅಮಿತಾಭ್ ಬಚ್ಚನ್ ಕ್ಯೂಟ್ ವಿಡಿಯೋ ನೋಡಿ
‘ಸಮಯ ಪಾಲನೆಯ ಮಾಡಬೇಕು ಎಂದಾದರೆ ನಾನು ಹೀಗೆ ಮಾಡುತ್ತೇನೆ ಎಂಬುದು ನಿಜ. ಆದರೆ ಹೆಲ್ಮೆಟ್ ಧರಿಸಿ ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತೇನೆ. ನಾನೊಬ್ಬನೇ ಈ ರೀತಿ ಮಾಡಿದ್ದಲ್ಲ. ಅಕ್ಷಯ್ ಕುಮಾರ್ ಕೂಡ ಶೂಟಿಂಗ್ ಸೆಟ್ಗೆ ಸರಿಯಾದ ಸಮಯಕ್ಕೆ ಬರಲು ಹೆಲ್ಮೆಟ್ ಧರಿಸಿ ತಮ್ಮ ಸೆಕ್ಯೂರಿಟಿ ಸಿಬ್ಬಂದಿಯ ಬೈಕ್ ಏರಿದ್ದರು’ ಎಂದಿದ್ದಾರೆ ಬಿಗ್-ಬಿ.
ಹಲವು ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಇಂದಿಗೂ ಅವರು ಹದಿಹರೆಯದ ಹುಡುಗನಂತೆ ಆ್ಯಕ್ಟೀವ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.