ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಆದರೆ ಅವರ ಖ್ಯಾತಿ ಮಾತ್ರ ದೇಶ-ವಿದೇಶಗಳಲ್ಲೂ ಪಸರಿಸಿದೆ. 79ರ ಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ಫುಲ್ ಆಕ್ಟಿವ್. ಅಷ್ಟೇ ಅಲ್ಲ, ಅವರ ಚಿತ್ರಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಜತೆಗೆ ಈಗಲೂ ಭಿನ್ನ ಭಿನ್ನ ಪಾತ್ರಗಳ ಮೂಲಕ ಅವರು ಗುರುತಿಸಿಕೊಳ್ಳುತ್ತಿದ್ಧಾರೆ. ಅಮಿತಾಭ್ ಅವರ ಅನೌನ್ಸ್ ಆಗಿರುವ ಚಿತ್ರಗಳು, ಬಿಡುಗಡೆಗೆ ಸಿದ್ಧವಿರುವ ಚಿತ್ರಗಳ ಪಟ್ಟಿಯನ್ನು ತೆಗೆದು ನೋಡಿದರೆ ಅದರ ಸಂಖ್ಯೆ ಏಳಕ್ಕೂ ಹೆಚ್ಚು. ಅಮಿತಾಭ್ ಒಪ್ಪಿಕೊಂಡ ಚಿತ್ರಗಳೇ ತೆರೆಗೆ ಬರಲು ಏನಿಲ್ಲವೆಂದರೂ ಇನ್ನೆರಡು ವರ್ಷಗಳು ಬೇಕು. ಅದರಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳೂ ಸೇರಿವೆ. ಇಷ್ಟೆಲ್ಲಾ ಖ್ಯಾತಿ ಪಡೆದಿರುವ ಅಮಿತಾಭ್ ಚಿತ್ರರಂಗಕ್ಕೆ ಪ್ರವೇಶ ಮಾಡುವಾಗ ಎಷ್ಟು ಕಷ್ಟಪಟ್ಟಿದ್ದರು? ಮುಂಬೈನ ಸಮುದ್ರ ಕಿನಾರೆಯಲ್ಲಿ ಸೂರಿಲ್ಲದೇ, ಇಲಿಗಳ ಓಡಾಟದ ನಡುವೆಯೇ ಅವರು ನಿದ್ರಿಸುತ್ತಿದ್ದ ಸಂಗತಿಗಳು ನಿಮಗೆ ಗೊತ್ತೇ? 1999ರಲ್ಲಿ ಸ್ವತಃ ಅಮಿತಾಭ್ ವೀರ್ ಸಾಂಘ್ವಿ ಜತೆಗಿನ ಸಂದರ್ಶನದಲ್ಲಿ ಹಂಚಿಕೊಂಡ ಕೆಲವು ಅಚ್ಚರಿಯ ವಿಚಾರಗಳು ಇಲ್ಲಿವೆ.
ಕೇವಲ ಡ್ರೈವಿಂಗ್ ಲೈಸನ್ಸ್ ತೆಗೆದುಕೊಂಡು ಬಾಂಬೆಗೆ ಬಂದಿದ್ದ ಬಿಗ್ಬಿ:
ಅಮಿತಾಭ್ ಆಗ ನಟನಾಗಿ ಕಾಣಿಸಿಕೊಳ್ಳುವ ಆಸೆಯಿಂದ ಮುಂಬೈಗೆ ಬಂದಿದ್ದರು. ಅವರು ತಂದಿದ್ದು ಕೇವಲ ಡ್ರೈವಿಂಗ್ ಲೈಸೆನ್ಸ್ ಮಾತ್ರ. ಒಂದು ವೇಳೆ ‘‘ನಾನು ನಟನಾಗದೇ ಹೋಗಿದ್ದರೆ ಕ್ಯಾಬ್ ಡ್ರೈವರ್ ಆಗುತ್ತಿದ್ದೆ’’ ಎಂದು ಅಮಿತಾಭ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘‘ಆಗ ನನ್ನ ಕಣ್ಣೆದುರು ಇದ್ದಿದ್ದು ನಟನೆ ಮಾತ್ರ’’ ಎಂದು ಅವರು ಹೇಳಿದ್ದರು.
ಬರೋಬ್ಬರಿ 10,000 ರೂಗಳ ಜಾಹಿರಾತು ಆಫರ್ ತಿರಸ್ಕರಿಸಿದ್ದ ಅಮಿತಾಭ್:
ಅಮಿತಾಭ್ ಬಚ್ಚನ್ ಮುಂಬೈಗೆ ಬಂದ ಆರಂಭಿಕ ದಿನಗಳಲ್ಲಿ ಬಹಳ ಕಷ್ಟದಲ್ಲಿದ್ದರು. ರೇಡಿಯೋ ನಿರೂಪಕರಾಗಿ ಅವರು ತಿಂಗಳಿಗೆ ಸುಮಾರು 50 ರೂಗಳನ್ನು ಗಳಿಸುತ್ತಿದ್ದರು. ಅವರ ಏಕೈಕ ಉದ್ದೇಶ ನಟನೆಯಲ್ಲಿ ಗುರುತಿಸಿಕೊಳ್ಳುವುದಾಗಿತ್ತು. ಈಗಿನಂತೆ ಆಗಲೂ ಜಾಹಿರಾತುಗಳಿಗೆ ದೊಡ್ಡ ಮಾರುಕಟ್ಟೆಯಿತ್ತು. ಈಗ ಎಲ್ಲಾ ಮಾದರಿಯ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಮಿತಾಭ್, ಆಗ ಜಾಹಿರಾತು ಆಫರ್ಗಳನ್ನು ತಿರಸ್ಕರಿಸಿದ್ದರು.
1960ರ ಸಮಯದಲ್ಲಿ ಅಮಿತಾಭ್ಗೆ ಜಾಹಿರಾತುಗಳಲ್ಲಿ ನಟಿಸುವುದಕ್ಕೆ ಬರೋಬ್ಬರಿ 10,000 ರೂಗಳ ಆಫರ್ ಬಂದಿತ್ತಂತೆ. ಆಗಿನ ಅವರ ತಿಂಗಳ ಸಂಬಳ ಕೇವಲ 50 ರೂ ಆಗಿತ್ತು. ಹಾಗಿದ್ದಾಗ್ಯೂ ಆಗಿನ ಕಾಲಕ್ಕೆ ಅತ್ಯಂತ ದೊಡ್ಡ ಮೊತ್ತವಾದ 10,000ವನ್ನು ಜಾಹಿರಾತು ಮೂಲಕ ಪಡೆಯಲು ಅಮಿತಾಭ್ ನಿರಾಕರಿಸಿದ್ದರು. ಆಫರ್ ತಿರಸ್ಕರಿಸಲು ಕಾರಣವೇನು ಎಂಬುದನ್ನು ಅಮಿತಾಭ್ ವಿವರಿಸಿದ್ದರು. ‘‘ಜಾಹಿರಾತುಗಳು ದೊಡ್ಡ ಮೊತ್ತ ನೀಡುತ್ತವೆ. ಆದರೆ ನನ್ನಿಂದ ಏನಾದರೂ ಕಿತ್ತುಕೊಳ್ಳುತ್ತದೆ ಎಂದು ನಾನಾಗ ಭಾವಿಸಿದ್ದೆ’’ ಎಂದಿದ್ದಾರೆ ಅಮಿತಾಭ್. ಇದೇ ಕಾರಣಕ್ಕೆ ಅವರು ಜಾಹಿರಾತಿನಲ್ಲಿ ತೊಡಗಿಕೊಳ್ಳಲಿಲ್ಲ.
10,000ದ ಆಫರ್ ಬಿಟ್ಟಿದ್ದ ಅಮಿತಾಭ್ ಸಮುದ್ರ ದಂಡೆಯಲ್ಲಿ ಉಳಿದುಕೊಳ್ಳಬೇಕಾಯಿತು!
ಅಮಿತಾಭ್ ಆಗ ಕಡುಕಷ್ಟದಲ್ಲಿದ್ದರು. ಅದಾಗ್ಯೂ ಜಾಹಿರಾತುಗಳಲ್ಲಿ ನಟಿಸಲು ಅವರು ಒಪ್ಪಿರಲಿಲ್ಲ. ಇದರ ಪರಿಣಾಮ ಅವರಿಗೆ ವಸತಿಗೆ ಸಮಸ್ಯೆಯಾಯಿತು. ಕೊನೆಗೆ ಮರೀನ್ ಡ್ರೈವ್ನ ಸಮುದ್ರ ಕಿನಾರೆಯಲ್ಲಿ ಅಮಿತಾಭ್ ನಿದ್ರೆ ಹೋಗುತ್ತಿದ್ದರು. ‘‘ಸ್ನೇಹಿತರೊಂದಿಗೆ ಉಳಿದುಕೊಳ್ಳಲು ಹಣವಿರಲಿಲ್ಲ. ಆದ್ದರಿಂದ ಹಲವು ದಿನ ಸಮುದ್ರ ದಡದಲ್ಲಿ ಮಲಗುತ್ತಿದ್ದೆ. ಆಗಲೇ ಎಂದೂ ನೋಡಿರದ, ಜೀವನದಲ್ಲೇ ಅತ್ಯಂತ ದೊಡ್ಡದಾದ ಇಲಿಗಳನ್ನು ನಾನು ನೋಡಿದ್ದು. ಅವುಗಳು ಸುತ್ತಮುತ್ತ ಓಡಾಡುತ್ತಿದ್ದವು’’ ಎಂದಿದ್ದಾರೆ ಅಮಿತಾಭ್ ಬಚ್ಚನ್. ನಂತರ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದು ಈಗ ಇತಿಹಾಸ.
ಇದನ್ನೂ ಓದಿ:
Rishabh Pant: ಬಾಲಿವುಡ್ ನಟಿಯೊಂದಿಗೆ ಪಂತ್ ಲವ್ವಿಡವ್ವಿ! ಪ್ರೇಯಸಿಗಾಗಿ ಬರೋಬ್ಬರಿ 16 ಗಂಟೆ ಕಾಯ್ದಿದ್ದ ರಿಷಭ್
‘ದಿ ಕಾಶ್ಮೀರ್ ಫೈಲ್ಸ್’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ್ದೇ ಆರ್ಭಟ