Amitabh Bachchan: ದೆಹಲಿಯಲ್ಲಿದ್ದ ಅಮಿತಾಭ್ ನಿವಾಸ ಸೇಲ್; ಬಿಗ್ಬಿ ಮನೆ ಮಾರಿದ್ದು ಎಷ್ಟು ಕೋಟಿಗೆ?
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹಲವೆಡೆ ಆಸ್ತಿಪಾಸ್ತಿ ಹೊಂದಿದ್ದಾರೆ. ಇದೀಗ ಅವರು ದೆಹಲಿಯಲ್ಲಿದ್ದ ನಿವಾಸವನ್ನು ಮಾರಾಟ ಮಾಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಬಾಲಿವುಡ್ನ (Bollywood) ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರ ಪೋಷಕರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಅಮಿತಾಭ್ ತಾಯಿ ತೇಜಿ ಬಚ್ಚನ್ ಹಾಗೂ ತಂದೆ ಹರಿವಂಶ್ ರಾಯ್ ಮೊದಲಿಗೆ ದೆಹಲಿಯಲ್ಲಿ ವಾಸವಾಗಿದ್ದರು. ಮುಂಬೈಗೆ ಬರುವ ಮುನ್ನ ಅಮಿತಾಭ್ ಕೂಡ ತಮ್ಮ ಪೋಷಕರೊಂದಿಗೆ ದೆಹಲಿಯಲ್ಲಿದ್ದರು. ಇದೀಗ ಬಿಗ್ಬಿ ದೆಹಲಿಯ ಆ ನಿವಾಸವನ್ನು ಮಾರಿದ್ದಾರೆ. ಈಗಾಗಲೇ ಮುಂಬೈನಲ್ಲಿ ಹಲವು ಆಸ್ತಿ ಹೊಂದಿರುವ ಅಮಿತಾಭ್, ದೆಹಲಿಯಲ್ಲಿರುವ ನಿವಾಸ ಮಾರಲು ಮನಸ್ಸು ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮಾರಾಟ ಪ್ರಕ್ರಿಯೆ, ನೋಂದಣಿ ಕಾರ್ಯಗಳು ಎಲ್ಲವೂ ಮುಕ್ತಾಯವಾಗಿದೆ. ದೆಹಲಿಯ ಗುಲ್ಮೊಹರ್ ಪಾರ್ಕ್ನಲ್ಲಿರುವ ಅಮಿತಾಭ್ ನಿವಾಸ ‘ಸೋಪಾನ್’ (Sopaan) ಬರೋಬ್ಬರಿ ₹ 23 ಕೋಟಿಗೆ ಸೇಲ್ ಆಗಿದೆ. ಆಸ್ತಿಯನ್ನು ಖರೀದಿಸಿದ್ದು ಯಾರು? ಈ ನಿವಾಸದ ವಿಶೇಷವೇನು? ಈ ಕುರಿತ ಮಾಹಿತಿ ಇಲ್ಲಿದೆ.
‘ಸೋಪಾನ್’ ಖರೀದಿಸಿದ್ದು ಯಾರು?
ದೆಹಲಿಯ ಗುಲ್ಮೊಹರ್ನಲ್ಲಿರುವ ‘ಸೋಪಾನ್’ ನಿವಾಸವನ್ನು ಖರೀದಿಸಿದ್ದು ಅವ್ನಿ ಬದೇರ್ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅವ್ನಿ ನೆಜೋನ್ ಗ್ರೂಪ್ ಆಫ್ ಕಂಪನೀಸ್ನ ಸಿಇಒ. ಅವ್ನಿ ಅವರಿಗೂ ಬಚ್ಚನ್ ಕುಟುಂಬಕ್ಕೂ ಬರೋಬ್ಬರಿ 35 ವರ್ಷಗಳ ಪರಿಚಯ. ವರದಿಯೊಂದರ ಪ್ರಕಾರ 418.05 ಚದರ ಮೀಟರ್ ಮನೆಯ ನೋಂದಣಿ 2021ರ ಡಿಸೆಂಬರ್ 7ಕ್ಕೆ ಪೂರ್ಣಗೊಂಡಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದರಕ್ಕೆ ಅನುಗುಣವಾಗಿ, ₹ 23 ಕೋಟಿಗೆ ಅಮಿತಾಭ್ ಮನೆಯನ್ನು ಸೇಲ್ ಮಾಡಿದ್ದಾರೆ.
‘‘ನಾವು ಇದೇ ಜಾಗದಲ್ಲಿ ವಾಸಿಸುತ್ತಿದ್ದೇವೆ. ಇಲ್ಲೇ ಸುತ್ತಮುತ್ತ ಹೊಸ ಜಾಗವಿದ್ದರೆ ಬೇಕಾಗಿತ್ತು. ಅಮಿತಾಭ್ ಮನೆ ಮಾರಾಟದ ಆಫರ್ ಮಾಡಿದಾಗ ಹಿಂದೆ ಮುಂದೆ ಯೋಚಿಸದೇ ಎಸ್ ಎಂದಿದ್ದೆವು’’ ಎಂದು ಅವ್ನಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಮಿತಾಭ್ ಅವರಿಂದ ಖರೀದಿಸಿರುವುದು ಹಳೆಯ ಮನೆಯಾಗಿದ್ದು, ಅದನ್ನು ಕೆಡವಿ ಅದೇ ಜಾಗದಲ್ಲಿ ಹೊಸದಾಗಿ ಮನೆ ಕಟ್ಟುತ್ತೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ತಿಂಗಳಿಗೆ 10 ಲಕ್ಷಕ್ಕೆ ನಿವಾಸವೊಂದನ್ನು ಬಾಡಿಗೆಗೆ ನೀಡಿರುವ ಅಮಿತಾಭ್:
ಅಮಿತಾಭ್ ಬಚ್ಚನ್ ಅವರಿಗೆ ಮುಂಬೈನಲ್ಲಿ ಹಲವು ಆಸ್ತಿ ಇದೆ. ಕೆಲ ತಿಂಗಳ ಮೊದಲು ಅಮಿತಾಭ್, ಬಾಲಿವುಡ್ ತಾರೆ ಕೃತಿ ಸನೋನ್ಗೆ ತಮ್ಮ ಒಡೆತನದ ನಿವಾಸವೊಂದನ್ನು ಬಾಡಿಗೆಗೆ ನೀಡಿದ್ದರು. ಎರಡು ವರ್ಷಗಳ ಕಾಲ ಪ್ರತಿ ತಿಂಗಳು 10 ಲಕ್ಷ ರೂ ಬಾಡಿಗೆ ಪಡೆಯುವ ಒಪ್ಪಂದಕ್ಕೆ ಅನುಗುಣವಾಗಿ ಅಮಿತಾಭ್ ಕೃತಿಗೆ ಬಾಡಿಗೆ ನೀಡಿದ್ದರು.
ಪ್ರಸ್ತುತ ಅಮಿತಾಭ್ ‘ಜುಹು’ವಿನಲ್ಲಿರುವ ತಮ್ಮ ನಿವಾಸ ‘ಜಲ್ಸಾ’ದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇದಲ್ಲದೇ ಜುಹುವಿನಲ್ಲೇ ಪ್ರತೀಕ್ಷಾ ಎಂಬ ಮನೆಯನ್ನೂ ಅಮಿತಾಭ್ ಹೊಂದಿದ್ದಾರೆ.
ಇದನ್ನೂ ಓದಿ:
ಪುನೀತ್ ಮನೆಯಲ್ಲಿ ಅಪ್ಪು ಫೋಟೋ ಮುಂದೆ ಅಲ್ಲು ಅರ್ಜುನ್ ಭಾವುಕ ಕ್ಷಣ; ವಿಡಿಯೋ ನೋಡಿ
ಅಣ್ಣಾವ್ರ ಮನೆ 2 ಭಾಗ ಆದಾಗ ಪಾರ್ವತಮ್ಮ ಹೇಳಿದ್ದೇನು? ಮುಖ್ಯವಾದ ವಿಚಾರ ತಿಳಿಸಿದ ರಾಘಣ್ಣ