ಬಾಲಿವುಡ್ ನಟ ಅರ್ಮಾನ್ ಕೊಹ್ಲಿ (Armaan Kohli) ಅವರು ಡ್ರಗ್ಸ್ ಕೇಸ್ನಲ್ಲಿ ಆರೋಪಿಯಾಗಿ ಈಗ ಪೊಲೀಸರ ವಶದಲ್ಲಿದ್ದಾರೆ. ಎನ್ಸಿಬಿ ಅಧಿಕಾರಿಗಳು ಭಾನುವಾರ (ಆ.29) ಮುಂಜಾನೆ ಅವರನ್ನು ಬಂಧಿಸಿದ್ದಾರೆ. ಶನಿವಾರ ಅರ್ಮಾನ್ ಕೊಹ್ಲಿ ಮನೆ ಮೇಲೆ ದಾಳಿ ನಡೆಸಿದಾಗ ಅನೇಕ ಮಾದಕ ವಸ್ತುಗಳು ಪತ್ತೆ ಆಗಿವೆ ಎನ್ನಲಾಗಿದೆ. ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರ ಜನಪ್ರಿಯತೆ ಕಡಿಮೆ ಆಗಿತ್ತು. ಈಗ ಡ್ರಗ್ಸ್ ಕೇಸ್ (Drugs Case) ಕಾರಣದಿಂದ ಏಕಾಏಕಿ ಅರ್ಮಾನ್ ಕೊಹ್ಲಿಯ ಹಳೇ ಚರಿತ್ರೆಯಲ್ಲ ಚರ್ಚೆಗೆ ಬರುತ್ತಿದೆ. ಅಚ್ಚರಿ ಎಂದರೆ ಅವರ ಬಗ್ಗೆ ನಟ ಶಾರುಖ್ ಖಾನ್ (Shah Rukh Khan) ಕೂಡ ಹಲವು ಬಾರಿ ಮಾತನಾಡಿದ್ದರು. ಶಾರುಖ್ಗೆ ಸ್ಟಾರ್ ಪಟ್ಟ ಸಿಗಲು ಅರ್ಮಾನ್ ಕೊಹ್ಲಿ ಕೂಡ ಪರೋಕ್ಷವಾಗಿ ಕಾರಣ ಆಗಿದ್ದರು ಎಂಬುದು ವಿಶೇಷ.
ಶಾರುಖ್ ಖಾನ್ ನಟಿಸಿದ ಮೊದಲ ಸಿನಿಮಾ ‘ದೀವಾನಾ’ 1992ರಲ್ಲಿ ತೆರಕಂಡಿತು. ಆ ಚಿತ್ರದಲ್ಲಿ ಶಾರುಖ್ ಜೊತೆ ರಿಷಿ ಕಪೂರ್ ಕೂಡ ನಟಿಸಿದ್ದರು. ಅಚ್ಚರಿ ಎಂದರೆ ‘ದೀವಾನಾ’ ಸಿನಿಮಾಗೆ ಶಾರುಖ್ ಖಾನ್ಗಿಂತಲೂ ಮುಂಚೆ ಆಯ್ಕೆ ಆಗಿದ್ದವರು ಇದೇ ಅರ್ಮಾನ್ ಕೊಹ್ಲಿ! ಅವರು ಒಂದು ಹಂತದ ಶೂಟಿಂಗ್ ಕೂಡ ಮುಗಿಸಿದ್ದರು. ಆದರೆ ಮಧ್ಯದಲ್ಲಿ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಅವರು ಆ ಸಿನಿಮಾದಿಂದ ಹಿಂದೆ ಸರಿದರು. ಅವರು ಬಿಟ್ಟುಹೋದ ಸ್ಥಾನಕ್ಕೆ ಬೇರೆ ಹೀರೋ ಆಯ್ಕೆ ಮಾಡಲು ನಿರ್ದೇಶಕ ರಾಜ್ ಕನ್ವರ್ ತುಂಬ ಹುಡುಕಾಡಿದರು.
ಅನಿಲ್ ಕಪೂರ್, ಸನ್ನಿ ಡಿಯೋಲ್, ಗೋವಿಂದ ಮತ್ತು ಟಾಲಿವುಡ್ ನಟ ನಾಗಾರ್ಜುನ ಅವರಿಗೂ ಆಫರ್ ನೀಡಲಾಯಿತು. ಆದರೆ ಯಾರೂ ಆ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಆಗ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶಾರುಖ್ ಖಾನ್ಗೆ ಈ ಆಫರ್ ಹೋಯಿತು. ಆರಂಭದಲ್ಲಿ ಡೇಟ್ ಸಮಸ್ಯೆ ಎದುರಾದರೂ ಕೂಡ ಅಂತಿಮವಾಗಿ ಅದರಲ್ಲಿ ನಟಿಸಲು ಶಾರುಖ್ ಒಪ್ಪಿಕೊಂಡರು. ಸಿನಿಮಾ ಹಿಟ್ ಆಯಿತು! ಮೊದಲ ಚಿತ್ರದಲ್ಲಿಯೇ ಶಾರುಖ್ ಖಾನ್ ಅವರನ್ನು ಜನರು ಮೆಚ್ಚಿಕೊಂಡರು. ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿತು.
ಅರ್ಮಾನ್ ಕೊಹ್ಲಿ ಬಿಟ್ಟು ಹೋದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಶಾರುಖ್ಗೆ ಹೀರೋ ಪಟ್ಟ ಸಿಕ್ಕಿತು. ಬಳಿಕ ಅವರು ಸ್ಟಾರ್ ಆದರು. ಈ ಮಾತನ್ನು ಕೆಲವು ಸಂದರ್ಶನದಲ್ಲಿ ಸ್ವತಃ ಶಾರುಖ್ ಹೇಳಿಕೊಂಡಿದ್ದುಂಟು. ‘ನಾನು ಸ್ಟಾರ್ ಆಗಿದ್ದಕ್ಕೆ ಅರ್ಮಾನ್ ಕೊಹ್ಲಿಯೇ ಕಾರಣ. ದೀವಾನಾ ಸಿನಿಮಾದ ಮೊದಲಿನ ಪೋಸ್ಟರ್ನಲ್ಲಿ ಅವರು ನಟಿ ದಿವ್ಯಾ ಭಾರತಿ ಜೊತೆ ಕಾಣಿಸಿಕೊಂಡಿದ್ದರು. ನಾನು ಇಂದಿಗೂ ಆ ಪೋಸ್ಟರ್ ಇಟ್ಟುಕೊಂಡಿದ್ದೇನೆ. ನನ್ನನ್ನು ಸ್ಟಾರ್ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಶಾರುಖ್ ಹೇಳಿದ್ದರು.
ಅರ್ಮಾನ್ ಕೊಹ್ಲಿ ಹಿನ್ನಲೆ:
ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು.
ಇದನ್ನೂ ಓದಿ:
‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್ಫ್ರೆಂಡ್ ಬಗ್ಗೆ ಶಾರುಖ್ ಖಡಕ್ ವಾರ್ನಿಂಗ್
Armaan Kohli: ಡ್ರಗ್ಸ್ ಕೇಸ್ನಲ್ಲಿ ನಟ ಅರ್ಮಾನ್ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು ಪತ್ತೆ