Armaan Kohli: ಡ್ರಗ್ಸ್ ಕೇಸ್ ಆರೋಪಿ ಅರ್ಮಾನ್ ಕೊಹ್ಲಿ ಯಾರು? ಹಿನ್ನೆಲೆ ಏನು? ಮಾಡಿಕೊಂಡ ವಿವಾದ ಒಂದೆರಡಲ್ಲ
Armaan Kohli: ಚಿತ್ರರಂಗದಲ್ಲಿ ಅರ್ಮಾನ್ ಕೊಹ್ಲಿ ಯಶಸ್ಸು ಪಡೆದಿದ್ದಕ್ಕಿಂತ ಕಾಂಟ್ರವರ್ಸಿ ಮಾಡಿಕೊಂಡಿದ್ದೇ ಹೆಚ್ಚು. ಹಲವು ನಟಿಯರ ಮೇಲೆ ಹಲ್ಲೆ ಮಾಡಿದ್ದ ಅವರು ಈಗ ಡ್ರಗ್ಸ್ ಕೇಸ್ನಲ್ಲಿ ಆರೋಪಿ ಆಗಿದ್ದಾರೆ.
ಬಾಲಿವುಡ್ ನಟ ಅರ್ಮಾನ್ ಕೊಹ್ಲಿ (Armaan Kohli) ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ನಿವಾಸದಲ್ಲಿ ಡ್ರಗ್ಸ್ ಪತ್ತೆ ಆಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಅರ್ಮಾನ್ ಕೊಹ್ಲಿ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವರು ದಶಕಗಳ ಹಿಂದೆಯೇ ಬಾಲಿವುಡ್ನ ಸೂಪರ್ ಸ್ಟಾರ್ ಆಗಿರಬೇಕಿತ್ತು. ಆದರೆ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲೇ ಇಲ್ಲ. ಹಲವು ಸಿನಿಮಾಗಳಲ್ಲಿ ನಟಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ತೆರೆಮರೆಗೆ ಸರಿದಿದ್ದರು. ಈಗ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಬಳಿಕ ಅವರ ಹೆಸರು ಮತ್ತೆ ಚಾಲ್ತಿಗೆ ಬಂದಿದೆ.
ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ಅರ್ಮಾನ್:
ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು. ಈಗ ಡ್ರಗ್ಸ್ ಕೇಸ್ನಲ್ಲಿ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ.
ತಪ್ಪು ನಿರ್ಧಾರಗಳಿಂದ ಮಿಸ್ ಆಯ್ತು ಗೆಲುವು:
ಶಾರುಖ್ ನಟನೆಯ ಮೊದಲ ಸಿನಿಮಾ ‘ದೀವಾನಾ’ 1992ರಲ್ಲಿ ತೆರೆಕಂಡು ಹಿಟ್ ಆಯಿತು. ಆ ಚಿತ್ರಕ್ಕೆ ಶಾರುಖ್ಗಿಂತಲೂ ಮೊದಲು ಆಯ್ಕೆ ಆಗಿದ್ದೇ ಅರ್ಮಾನ್. ಆದರೆ ಚಿತ್ರತಂಡದ ಜೊತೆ ಕಿರಿಕ್ ಮಾಡಿಕೊಂಡು ಅವರು ಅರ್ಧಕ್ಕೆ ಹೊರನಡೆದಿದ್ದರು. ಪರಿಣಾಮ ಆ ಅವಕಾಶ ಶಾರುಖ್ಗೆ ಸಿಕ್ಕಿತು. ಆ ಸಿನಿಮಾದಿಂದಲೇ ಶಾರುಖ್ ಸ್ಟಾರ್ ಎನಿಸಿಕೊಂಡರು. ನಂತರ ಶಾರುಖ್ ನಟಿಸಿದ್ದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದಲ್ಲೂ ಅರ್ಮಾನ್ಗೆ ಒಂದು ಪ್ರಮುಖ ಪಾತ್ರ ನೀಡಲಾಗಿತ್ತು. ಅದನ್ನೂ ಕೂಡ ಅವರು ನಿರಾಕರಿಸಿ ತಪ್ಪು ಮಾಡಿದರು. ಹೀಗೆ ಅರ್ಮಾನ್ ತಿರಸ್ಕರಿಸಿದ ಶೇ.80ರಷ್ಟು ಸಿನಿಮಾಗಳು ಸೂಪರ್ ಹಿಟ್ ಆದವು. ಅವರು ಬಿಟ್ಟ ಪಾತ್ರಗಳನ್ನು ನಿಭಾಯಿಸಿದ ಹಲವು ಕಲಾವಿದರ ಸೂಪರ್ ಸ್ಟಾರ್ಗಳಾದರು!
ಅರ್ಮಾನ್ ವೃತ್ತಿಜೀವನಲ್ಲಿವೆ ಹಲವಾರು ಕಿರಿಕ್ಗಳು:
2013ರಲ್ಲಿ ಅರ್ಮಾನ್ ಅವರ ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದರು. ತೀವ್ರ ಮುಂಗೋಪದ ಕಾರಣಕ್ಕಾಗಿ ಅವರು ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡಿದ್ದರು. ನಟಿ ಸೋಫಿಯಾ ಹಯಾತ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಮಾಡೆಲ್ ನೀರೂ ರಂಧಾವಾ ಜೊತೆ ಅರ್ಮಾನ್ ಡೇಟಿಂಗ್ ಮಾಡುತ್ತಿದ್ದರು. ಅವರ ಮೇಲೂ ಹಲ್ಲೆ ಮಾಡಿದ್ದರು. ಆ ಕುರಿತು ನೀರೂ ಅವರು ದೂರು ನೀಡಿದ್ದರು.
2008ರ ಸಮಯದಲ್ಲಿ ನಟಿ ಮುನ್ಮುನ್ ದತ್ತಾ ಜೊತೆ ಅರ್ಮಾನ್ ಪ್ರೀತಿಯಲ್ಲಿ ಮುಳುಗಿದ್ದರು. ಆ ಸಂಬಂಧ ಕೂಡ ಬ್ರೇಕಪ್ನಲ್ಲಿ ಅಂತ್ಯವಾಯ್ತು. ಅರ್ಮಾನ್ ಅವರು ದೈಹಿಕವಾಗಿ ಹಲ್ಲೆ ಮಾಡುತ್ತಾರೆ ಎಂದು ಮುನ್ಮುನ್ ದತ್ತಾ ಆರೋಪಿಸಿದ್ದರು. ಬಿಗ್ ಬಾಸ್ನಲ್ಲಿದ್ದಾಗ ನಟಿ ತನಿಶಾ ಮುಖರ್ಜಿ ಜೊತೆ ಅರ್ಮಾನ್ ಹೆಚ್ಚು ಕ್ಲೋಸ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ಕೆಟ್ಟದಾಗಿ ನಡೆದುಕೊಂಡಿದ್ದನ್ನು ವೀಕ್ಷಕರು ಗಮನಿಸಿದ್ದರು.
ಇದನ್ನೂ ಓದಿ:
ಶಾರುಖ್ ಸ್ಟಾರ್ ಆಗಲು ಕಾರಣವೇ ಡ್ರಗ್ಸ್ ಕೇಸ್ ಆರೋಪಿ ಅರ್ಮಾನ್ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ
Armaan Kohli: ಡ್ರಗ್ಸ್ ಕೇಸ್ನಲ್ಲಿ ನಟ ಅರ್ಮಾನ್ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು ಪತ್ತೆ