ವಿಮಾನ ತಡ ಆಗಿದ್ದಕ್ಕೆ ಪೈಲೆಟ್ ಮೇಲೆ ಹಲ್ಲೆ; ವೈರಲ್ ವಿಡಿಯೋಗೆ ಸೋನು ಸೂದ್ ಪ್ರತಿಕ್ರಿಯೆ
ವಿಮಾನ ತಡವಾಗಿದೆ ಎಂದು ಘೋಷಿಸಿದ ಪೈಲೆಟ್ ಮೇಲೆ ವ್ಯಕ್ತಿಯೊಬ್ಬನು ಹಲ್ಲೆ ಮಾಡಿದ್ದಾನೆ. ‘ವಿಮಾನ ಚಲಾಯಿಸು. ಇಲ್ಲದಿದ್ದರೆ ಬಾಗಿಲು ತೆಗಿ’ ಎಂದು ಆವಾಜ್ ಹಾಕಿ ವಿಮಾನದೊಳಗೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಸೋನು ಸೂದ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಭಾರತದಲ್ಲಿ ಹವಾಮಾನ ವೈಪರಿತ್ಯ ಉಂಟಾಗಿದೆ. ಅದರ ಪರಿಣಾಮವಾಗಿ ಅನೇಕ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಾಸ ಉಂಟಾಗಿದೆ. ಪ್ರಮುಖ ನಗರಗಳ ಏರ್ಪೋರ್ಟ್ಗಳಲ್ಲಿ ಪ್ರಯಾಣಿಕರು ಹಲವು ಗಂಟೆಗಳ ಕಾಲ ಕಾಯುವಂತಾಗಿದೆ. ತಾಳ್ಮೆ ಕಳೆದುಕೊಂಡ ಪ್ರಯಾಣಿಕನೊಬ್ಬ ಅನಾಗರಿಕನಂತೆ ವರ್ತಿಸಿದ್ದಾನೆ. ವಿಮಾನ ತಡವಾಗಿದೆ ಎಂದು ಘೋಷಿಸಿದ ಪೈಲೆಟ್ ಮೇಲೆ ಆತ ಹಲ್ಲೆ (Assault on pilot) ಮಾಡಿದ್ದಾನೆ. ‘ವಿಮಾನ ಚಲಾಯಿಸು. ಇಲ್ಲದಿದ್ದರೆ ಬಾಗಿಲು ತೆಗಿ’ ಎಂದು ಆವಾಜ್ ಹಾಕುತ್ತಾ, ವಿಮಾನದೊಳಗೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ (viral video) ನೋಡಿ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ನಟ ಸೋನು ಸೂದ್ (Sonu Sood) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಹವಾಮಾನದ ಮೇಲೆ ಮನುಷ್ಯನ ನಿಯಂತ್ರಣ ಇಲ್ಲ. ಅದರ ಸ್ವಭಾವ ಬೇರೆ. ನಾನು ವಿಮಾನ ನಿಲ್ದಾಣದಲ್ಲಿ ತಾಳ್ಮೆಯಿಂದ ಮೂರು ಗಂಟೆಯಿಂದ ಕಾಯುತ್ತಿದ್ದೇನೆ. ಇದು ಕಷ್ಟ ಎಂಬುದು ಗೊತ್ತು. ಆದರೂ ವಿಮಾನದ ಸಿಬ್ಬಂದಿ ಜೊತೆ ಸಮಾಧಾನದಿಂದ ವರ್ತಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಅವರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸೋನು ಸೂದ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ.
A passenger punched an Indigo capt in the aircraft as he was making delay announcement. The guy ran up from the last row and punched the new Capt who replaced the previous crew who crossed FDTL. Unbelievable ! @DGCAIndia @MoCA_GoI pic.twitter.com/SkdlpWbaDd
— Capt_Ck (@Capt_Ck) January 14, 2024
‘ವಿಮಾನದ ಸಿಬ್ಬಂದಿಯ ಜೊತೆ ಜನರು ಕೆಟ್ಟದಾಗಿ ನಡೆದುಕೊಳ್ಳುವ ವಿಡಿಯೋವನ್ನು ನಾನು ಆಗಾಗ ನೋಡಿದ್ದೇನೆ. ಕೆಲವು ಸಂದರ್ಭಗಳು ಯಾರ ನಿಯಂತ್ರಣದಲ್ಲೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರನ್ನೂ ನಾವು ಗೌರವಿಸಬೇಕು. ವಿಮಾನದ ಸಿಬ್ಬಂದಿಯಿಂದಾಗಿ ತಡ ಆಗುವುದಿಲ್ಲ’ ಎಂಬುದನ್ನು ಸೋನು ಸೂದ್ ಅವರು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಸೆಟ್ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್ಗೆ ಆಗಿತ್ತು ಶಾಕ್
ಪೈಲೆಟ್ ಮೇಲೆ ಪ್ರಯಾಣಿಕ ಹಲ್ಲೆ ಮಾಡುತ್ತಿರುವ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಸೋನು ಸೂದ್ ಶೇರ್ ಮಾಡಿಕೊಂಡಿದ್ದಾರೆ. ‘ಈ ರೀತಿ ಜನರು ವರ್ತಿಸುವುದನ್ನು ಮುಂದುವರಿಸಿದರೆ ವಿಮಾನದ ಸಿಬ್ಬಂದಿಗೆ ಆತ್ಮರಕ್ಷಣೆಯ ತರಬೇತಿ ಕಡ್ಡಾಯ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತಿಗೆ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಮತ ಸೂಚಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ಸೋನು ಸೂದ್ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಹಲವು ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ