ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ?
ಏ.11ರಂದು ಈದ್ ಪ್ರಯುಕ್ತ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಇದೇ ಗುರುವಾರ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಅವರಂತಹ ಘಟಾನುಘಟಿ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ನ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಸಿನಿಮಾ ಈದ್ ಹಬ್ಬದ ಪ್ರಯುಕ್ತ ಏಪ್ರಿಲ್ 11ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ಟೈಗರ್ ಶ್ರಾಫ್ ಅವರು ಜೊತೆಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರಿಬ್ಬರು ತೆರೆಹಂಚಿಕೊಂಡಿದ್ದಾರೆ. ಭಾರಿ ಬಜೆಟ್ನಲ್ಲಿ ಈ ಚಿತ್ರ ತಯಾರಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಹಾಗಾದರೆ ಮೊದಲ ದಿನ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ (Box Office Collection) ಆಗಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಈ ಚಿತ್ರ ಉತ್ತಮ ಓಪನಿಂಗ್ ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ.
‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇವೆ. ಆ ಬಗ್ಗೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಈ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಾರೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮೊದಲ ದಿನ 15ರಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ ಎಂಬ ನಿರೀಕ್ಷೆ ಇದೆ.
ಈ ಸಿನಿಮಾಗೆ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಮರ್ಥ್ಯ ಇದೆ. ಆದರೆ ಇದೇ ವಾರ (ಏ.10) ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ಕೂಡ ತೆರೆಕಾಣುತ್ತಿದೆ. ಇಬ್ಬರ ಪೈಪೋಟಿ ಜೋರಾಗಿರಲಿದೆ. ‘ಮೈದಾನ್’ ಒಂದು ಕ್ಲಾಸ್ ಸಿನಿಮಾ. ಹಾಗಾಗಿ ಸಹಜವಾಗಿಯೇ ಆ ಚಿತ್ರಕ್ಕಿಂತಲೂ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ‘ಮೈದಾನ್’ ಸಿನಿಮಾಗೆ ಮೊದಲ ದಿನ 10 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಬಹುದು ಎಂದು ಟ್ರೇಡ್ ಪಂಡಿತರು ಊಹಿಸಿದ್ದಾರೆ.
ಇದನ್ನೂ ಓದಿ: 500 ರೂಪಾಯಿ ಬಾಡಿಗೆ ಮನೆ ಖರೀದಿಸಲಿರುವ ಅಕ್ಷಯ್ ಕುಮಾರ್; ಕಾರಣ ಏನು?
ಅಲಿ ಅಬ್ಬಾಸ್ ಜಫರ್ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಹಾಗಾಗಿ ಕೇರಳದಲ್ಲಿ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು. ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈದ್ ಪ್ರಯುಕ್ತ ರಜೆ ಇರುವುದರಿಂದ ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.