Sanya Malhotra: ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಯಾದ ದಂಗಲ್ ನಟಿ; ಅವರ ಈ ನಿರ್ಧಾರಕ್ಕೆ ಕಾರಣವೇನು?
ಪ್ರಸ್ತುತ ಬಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಿರುವ ದಂಗಲ್ ಖ್ಯಾತಿಯ ನಟಿ ಸಾನ್ಯಾ ಮಲ್ಹೋತ್ರಾ ತಮ್ಮ ಹೊಸ ಆಹಾರ ಪದ್ಧತಿಯ ಕುರಿತು ಮಾತನಾಡಿದ್ದಾರೆ. ಸಸ್ಯಾಹಾರವನ್ನು ಅಳವಡಿಸಿಕೊಂಡಿರುವ ಅವರು, ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದ್ದಾರೆ.
ಬಾಲಿವುಡ್ ನಟಿಯರು ಹೊಸ ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದು, ಅದರ ಬಗ್ಗೆ ಮಾತನಾಡುವುದು ಹೊಸದಲ್ಲ. ಈಗ ‘ದಂಗಲ್’, ‘ಲೂಡೊ’, ‘ಫೊಟೊಗ್ರಾಫ್’ ಮೊದಲಾದ ಚಿತ್ರಗಳಲ್ಲಿ ಮಿಂಚಿರುವ ನಟಿ ಸಾನ್ಯಾ ಮಲ್ಹೋತ್ರಾ ತಾವು ಸಸ್ಯಾಹಾರಿಯಾದದ್ದರ ಕುರಿತು ಹೇಳಿಕೊಂಡಿದ್ದಾರೆ. ಬಹಳ ಕಾಲದಿಂದ ಸಸ್ಯಾಹಾರವನ್ನು ರೂಡಿಸಿಕೊಳ್ಳಬೇಕು ಎಂದು ಅವರು ಪ್ರಯತ್ನಿಸುತ್ತಿದ್ದರಂತೆ. ಕೊರೊನಾ ಕಾರಣದಿಂದ ಉಂಟಾದ ಎರಡನೇ ಲಾಕ್ ಡೌನ್ ಅವಧಿಯಲ್ಲಿ ಸಹಜವಾಗಿ ಅವರು ಹೊಸ ಆಹಾರ ಪದ್ಧತಿಯನ್ನು ರೂಡಿಸಿಕೊಂಡರಂತೆ. ಈ ಕುರಿತು ಸಾನ್ಯಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಎರಡನೇ ಬಾರಿ ಲಾಕ್ಡೌನ್ ಆದಾಗ 29 ವರ್ಷದ ಸಾನ್ಯಾ ಮನೆಯಲ್ಲಿ ಒಬ್ಬರೇ ಇದ್ದರಂತೆ. ಆಗ ತಮ್ಮ ಅಡುಗೆಯನ್ನು ತಾವೇ ತಯಾರಿಸಿಕೊಳ್ಳುವ ಸಂದರ್ಭ ಬಂತು. ದಿನವೂ ಸೇವಿಸುತ್ತಿದ್ದ ಮೊಟ್ಟೆ ಮತ್ತು ಇತರ ಮಾಂಸಾಹಾರಕ್ಕೆ ಪರ್ಯಾಯವನ್ನು ಹುಡುಕಿ, ಅದನ್ನು ತಿನ್ನುವುದಕ್ಕೆ ಅವರು ಅಭ್ಯಾಸ ಮಾಡಿಕೊಂಡರಂತೆ. ಹೊಸ ಆಹಾರ ಪದ್ಧತಿ ಅವರಿಗೆ ವೈವಿಧ್ಯತೆಯನ್ನೂ, ಸಂತೋಷವನ್ನೂ ನೀಡುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಸ್ಯಾಹಾರ ರೂಡಿಸಿಕೊಂಡಿದ್ದರಿಂದ ಏನಾದರೂ ಬದಲಾವಣೆಯಾಗಿದೆಯೇ ಎಂಬುದನ್ನೂ ಅವರು ಹೇಳಿದ್ದಾರೆ. “ಈಗ ದಿನವಿಡೀ ಲವಲವಿಕೆಯಿಂದಿರುತ್ತೇನೆ. ದೇಹ ಹಗುರವಾಗಿರುವಂತೆ ಅನಿಸುತ್ತದೆ. ಮೊದಲಿಗೂ, ಈಗಿನದ್ದಕ್ಕೂ ಬಹಳ ವ್ಯತ್ಯಾಸಗಳನ್ನು ಕಾಣುತ್ತಿದ್ದೇನೆ. ಈಗ ಮೊಸರನ್ನು ಬಳಸುತ್ತೇನೆ. ಅದಕ್ಕೂ ಪರ್ಯಾಯವನ್ನು ಕಂಡುಹಿಡಿಯಬೇಕು. ಆಗ ನಾನು ವೇಗನ್ ಆಗಬಹುದು. ಆದರೆ, ದಾಲ್ ಚಾವಲ್ ಗೆ ಮೊಸರನ್ನು ಹಾಕಿಕೊಂಡು ತಿನ್ನುವುದು ನನಗಿಷ್ಟ. ಹಾಗಿದ್ದೂ ವೇಗನ್ ಆಗಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ ಸಾನ್ಯಾ ಮಲ್ಹೋತ್ರಾ.
ಆಹಾರ ಪದ್ಧತಿಯಲ್ಲಿನ ಸಣ್ಣ ಬದಲಾವಣೆಯೂ ಪರಿಸರಕ್ಕೆ ಒಂದು ಕೊಡುಗೆ ಎಂದು ಸಾನ್ಯಾ ಭಾವಿಸಿದ್ದಾರೆ. “ಪರಿಸರದ ಬಗ್ಗೆ ಕಾಳಜಿ ವಹಿಸುವುದು, ಅದರ ಬಗ್ಗೆ ಅರಿವನ್ನು ಹೊಂದಿರುವುದು ಪ್ರತಿಯೊಬ್ಬನ ಕರ್ತವ್ಯ. ಎಷ್ಟೇ ಚಿಕ್ಕದಾದರೂ ವೈಯಕ್ತಿಕ ನೆಲೆಯಲ್ಲಿ ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದು ಬಹಳ ಮುಖ್ಯ. ನಾನೂ ಅದರಂತೆ ನನ್ನ ಜೀವನ ಶೈಲಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ; ನೀವೂ ಪ್ರಯತ್ನಿಸಿ” ಎಂದಿದ್ದಾರೆ ಬಾಲಿವುಡ್ ಬೆಡಗಿ ಸಾನ್ಯಾ.
ಸಾನ್ಯಾ ತಮ್ಮ ಮುಂದಿನ ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಜೊತೆ ಬಣ್ಣ ಹಚ್ಚಲಿದ್ದು, ಆ ಚಿತ್ರಕ್ಕೆ ಬಹಳ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಇತ್ತೀಚಿನ ಚಿತ್ರ ‘ಪಾಗ್ಲೆಟ್’ ಬೆಟ್ ಫ್ಲಿಕ್ಸನಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿತ್ತು.
ಇದನ್ನೂ ಓದಿ:
Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್ನಲ್ಲಿ ದರೋಡೆ!
(Bollywood actress Sanya Malhotra says how she turned to vegetarian)