‘ಸನ್ನಿ ಲಿಯೋನ್ ಅವರನ್ನೇ ಒಪ್ಪಿಕೊಂಡ ನಾವು ಶಿಲ್ಪಾ ಶೆಟ್ಟಿಯನ್ನು ಯಾಕೆ ದ್ವೇಷಿಸುತ್ತೇವೆ?’; ಹಿಮಾಂಶ್ ಕೊಹ್ಲಿ ಪ್ರಶ್ನೆ
ರಾಜ್ ಕುಂದ್ರಾ ನಿಜಕ್ಕೂ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಕೋರ್ಟ್ನಲ್ಲಿ ಸಾಬೀತಾಗಬೇಕು. ಅದಕ್ಕೂ ಮುನ್ನವೇ ನೆಟ್ಟಿಗರು ಶಿಲ್ಪಾ ಮೇಲೆ ದ್ವೇಷ ಸಾಧಿಸುತ್ತಿರುವುದನ್ನು ನಟ ಹಿಮಾಂಶ್ ಕೊಹ್ಲಿ ವಿರೋಧಿಸಿದ್ದಾರೆ.
ಉದ್ಯಮಿ ರಾಜ್ ಕುಂದ್ರ (Raj Kundra) ಅವರು ಅಶ್ಲೀಲ ಸಿನಿಮಾ ದಂಧೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಮನಬಂದಂತೆ ಟ್ರೋಲ್ ಮಾಡಲಾಗುತ್ತಿದೆ. ಇದು ಅವರ ಕುಟುಂಬದವರ ಮೇಲೆ ಪರಿಣಾಮ ಬೀರಿದೆ. ರಾಜ್ ಕುಂದ್ರಾ ನಿಜಕ್ಕೂ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಕೋರ್ಟ್ನಲ್ಲಿ ಸಾಬೀತಾಗಬೇಕು. ಅದಕ್ಕೂ ಮುನ್ನವೇ ನೆಟ್ಟಿಗರು ಶಿಲ್ಪಾ ಮೇಲೆ ದ್ವೇಷ ಸಾಧಿಸುತ್ತಿರುವುದನ್ನು ನಟ ಹಿಮಾಂಶ್ ಕೊಹ್ಲಿ (Himansh Kohli) ವಿರೋಧಿಸಿದ್ದಾರೆ. ಶಿಲ್ಪಾಗೆ ಸಪೋರ್ಟ್ ಮಾಡುವ ಭರದಲ್ಲಿ ಅವರು ಸನ್ನಿ ಲಿಯೋನ್ (Sunny Leone) ಹೆಸರನ್ನು ಎಳೆದು ತಂದಿದ್ದಾರೆ.
ಬಾಲಿವುಡ್ನಲ್ಲಿ ಹಿಮಾಂಶ್ ಕೊಹ್ಲಿ ಮಾಡಿದ್ದು ಮೂರು ಮತ್ತೊಂದು ಸಿನಿಮಾ ಆದರೂ ಕೂಡ ಅವರ ಜನಪ್ರಿಯತೆಗೇನೂ ಕಮ್ಮಿ ಇಲ್ಲ. ಗಾಯಕಿ ನೇಹಾ ಕಕ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದ ಅವರು ನಂತರ ಬ್ರೇಕಪ್ ಮಾಡಿಕೊಂಡರು. ಈಗ ಶಿಲ್ಪಾ ಶೆಟ್ಟಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಚಿತ್ರರಂಗ ಎಂಬುದು ಎಲ್ಲರಿಗೂ ಮುಕ್ತವಾದ ಮತ್ತು ಸುರಕ್ಷಿತವಾಗಿ ಸ್ಥಳವಾಗಿದೆ. ಸನ್ನಿ ಲಿಯೋನ್ ಅವರನ್ನೇ ನಾವು ಒಪ್ಪಿಕೊಂಡಿದ್ದೇವೆ. ಅವರ ಬಾಲಿವುಡ್ ಸಿನಿಮಾಗಳನ್ನು ಸೆಲೆಬ್ರೇಟ್ ಮಾಡಿದ್ದೇವೆ. ಆದರೆ ಶಿಲ್ಪಾ ಶೆಟ್ಟಿ ಅವರನ್ನು ಅಶ್ಲೀಲ ಸಿನಿಮಾ ದಂಧೆಯಲ್ಲಿ ಎಳೆದುತಂದಿರುವುದು ಆಘಾತಕಾರಿ ವಿಚಾರ’ ಎಂದು ಹಿಮಾಂಶ್ ಕೊಹ್ಲಿ ಹೇಳಿದ್ದಾರೆ.
ತಮ್ಮನ್ನು ಟಾರ್ಗೆಟ್ ಮಾಡಿರುವುದಕ್ಕೆ ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದರು. ‘ಕಳೆದ ಕೆಲವು ದಿನಗಳು ನನ್ನ ಪಾಲಿಗೆ ತುಂಬ ಚಾಲೆಂಜಿಂಗ್ ಆಗಿದ್ದವು. ಹಲವು ಊಹಾಪೋಹ ಮತ್ತು ಆರೋಪಗಳು ಎದುರಾಗಿವೆ. ಮಾಧ್ಯಮಗಳಿಂದ ಮತ್ತು ಹಿತ ಶತ್ರುಗಳಿಂದ ನನ್ನ ಮಾನಹಾನಿ ಆಗಿದೆ. ನನ್ನ ಕುಟುಂಬವನ್ನೂ ಟ್ರೋಲ್ ಮಾಡಲಾಗಿದೆ. ಈ ಪ್ರಕರಣವು ತನಿಖೆಯ ಹಂತದಲ್ಲಿ ಇರುವುದರಿಂದ ನಾನು ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಹಾಗಾಗಿ ನಾನು ಹೇಳಿದ್ದೇನೆ ಎಂಬಂತಹ ಸುಳ್ಳು ಹೇಳಿಕೆಗಳನ್ನು ಪ್ರಕಟಿಸಬೇಡಿ. ಮುಂಬೈ ಪೊಲೀಸರು ಮತ್ತು ಭಾರತದ ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಒಂದು ಕುಟುಂಬವಾಗಿ ನಾನು ಕಾನೂನಿನ ಮೂಲಕ ಹೋರಾಡುತ್ತೇವೆ. ಆದರೆ ಅಲ್ಲಿನವರೆಗೂ ತಾಯಿಯಾಗಿ ನನ್ನ ಮಕ್ಕಳ ಖಾಸಗಿತನವನ್ನು ರಕ್ಷಿಸುವ ಸಲುವಾಗಿ ಒಂದು ಮನವಿ ಮಾಡುತ್ತೇನೆ’ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.
ರಾಜ್ ಕುಂದ್ರಾ ಅವರು ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಹಾಗಾಗಿ ಅವರನ್ನು ಜು.27ರಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಹೊಸ ಹೊಸ ಅಂಶಗಳು ಬಯಲಾಗುತ್ತಿವೆ.
ಇದನ್ನೂ ಓದಿ:
Viaan: ಅಪ್ಪನ ಅರೆಸ್ಟ್, ಅಮ್ಮನ ಕಣ್ಣೀರ ನಡುವೆ ಮೊದಲ ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಮಗ
ತೀವ್ರ ಸಂಕಷ್ಟದ ನಡುವೆಯೂ ಬಿಗ್ ಬಾಸ್ ಓಟಿಟಿಗೆ ಬರ್ತಾರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ?