ಬಾಯ್ಕಾಟ್ ಟ್ರೆಂಡ್ ಬ್ರೇಕ್ ಮಾಡಿದ ‘ಬ್ರಹ್ಮಾಸ್ತ್ರ’; ಮೂರು ದಿನಕ್ಕೆ 225 ಕೋಟಿ ರೂಪಾಯಿ ಕಲೆಕ್ಷನ್
ಸಿನಿಮಾಗೆ ಸೃಷ್ಟಿ ಆದ ಹೈಪ್ನಿಂದ ವೀಕೆಂಡ್ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ನತ್ತ ಮುಖ ಮಾಡುತ್ತಾರೆ. ಆದರೆ, ವಾರದ ಮೊದಲ ದಿನ ಎಷ್ಟು ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸುತ್ತಾರೆ ಅನ್ನೋದರ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಆಗುತ್ತದೆ.
ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ‘ಬಾಯ್ಕಾಟ್ ಬ್ರಹ್ಮಾಸ್ತ್ರ’ ಎಂಬ ಟ್ರೆಂಡ್ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಈ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ. ಹೀಗಾಗಿ, ‘ಬ್ರಹ್ಮಾಸ್ತ್ರ’ ಸಿನಿಮಾ ಮೂರೇ ದಿನಕ್ಕೆ ಬರೋಬ್ಬರಿ 225 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಿ ಬೀಗುವುದು ಪಕ್ಕಾ ಆಗಿದೆ.
‘ಬ್ರಹ್ಮಾಸ್ತ್ರ’ ಸಿನಿಮಾ ವೀಕ್ಷಿಸಿದ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ನೀಡಿದರು. ಈ ಚಿತ್ರಕ್ಕೆ ವಿಮರ್ಶಕರೂ ಕಡಿಮೆ ಅಂಕ ನೀಡಿದರು. ಹೈ ಬಜೆಟ್ ಚಿತ್ರಗಳಿಗೆ ಮೊದಲ ದಿನ ಒಳ್ಳೆಯ ವಿಮರ್ಶೆ ಸಿಕ್ಕರಷ್ಟೇ ಪ್ರೇಕ್ಷಕರು ನೋಡಲು ತೆರಳುತ್ತಾರೆ ಎಂಬ ಮಾತಿದೆ. ಆದರೆ, ಈ ಮಾತನ್ನು ಸುಳ್ಳು ಮಾಡುವ ರೀತಿಯಲ್ಲಿ ಈ ಚಿತ್ರ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಹಿಂದಿ ವರ್ಷನ್ನಿಂದ ‘ಬ್ರಹ್ಮಾಸ್ತ್ರ’ ಸಿನಿಮಾಗೆ 108 ಕೋಟಿ ರೂಪಾಯಿ ಗಳಿಕೆ ಆಗಿದೆ. ಸೆಪ್ಟೆಂಬರ್ 9ರಂದು 31.5 ಕೋಟಿ ರೂಪಾಯಿ, ಸೆಪ್ಟೆಂಬರ್ 10ರಂದು 37.5 ಕೋಟಿ ರೂಪಾಯಿ ಹಾಗೂ ಸೆಪ್ಟೆಂಬರ್ 11ರಂದು 39.5 ಕೋಟಿ ರೂಪಾಯಿ ಅನ್ನು ಸಿನಿಮಾ ಗಳಿಸಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 225 ಕೋಟಿ ರೂಪಾಯಿ ಗಳಿಕೆ ಮಾಡಿದ ಅನ್ನೋದು ವಿಶೇಷ.
ಸಿನಿಮಾಗೆ ಸೃಷ್ಟಿ ಆದ ಹೈಪ್ನಿಂದ ವೀಕೆಂಡ್ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ನತ್ತ ಮುಖ ಮಾಡುತ್ತಾರೆ. ಆದರೆ, ವಾರದ ಮೊದಲ ದಿನ ಎಷ್ಟು ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸುತ್ತಾರೆ ಅನ್ನೋದರ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಆಗುತ್ತದೆ. ಈ ಕಾರಣಕ್ಕೆ ಇಂದು (ಸೆಪ್ಟೆಂಬರ್ 12) ‘ಬ್ರಹ್ಮಾಸ್ತ್ರ’ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ ಚಿತ್ರದ ಕಲೆಕ್ಷನ್ ಲೆಕ್ಕ ಫೇಕ್? ಅನುಮಾನ ವ್ಯಕ್ತಪಡಿಸಿದ ನಟಿ ಕಂಗನಾ ರಣಾವತ್
‘ಬ್ರಹ್ಮಾಸ್ತ್ರ’ ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿದೆ. ಈ ಕಾರಣಕ್ಕೆ ಸಿನಿಮಾ ಸಾಕಷ್ಟು ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಿದರೆ ಮಾತ್ರ ನಿರ್ಮಾಪಕರು ಲಾಭ ಕಾಣಲಿದ್ದಾರೆ. ಆದಾಗ್ಯೂ ಸಿನಿಮಾ ಬ್ಲಾಕ್ಬಸ್ಟರ್ ಎಂದು ಚಿತ್ರತಂಡ ಘೋಷಿಸಿಕೊಂಡಿದೆ.
Published On - 5:43 pm, Mon, 12 September 22