ನಟ ರಣವೀರ್ ಸಿಂಗ್ (Ranveer Singh) ಅವರು ಇತ್ತೀಚೆಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಶೂಟ್ ವೇಳೆ ಅವರು ದೇಹದ ಮೇಲೆ ಯಾವುದೇ ಬಟ್ಟೆ ಧರಿಸಿರಲಿಲ್ಲ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ರಣವೀರ್ ಸಿಂಗ್ ಅವರ ವಿರುದ್ಧ ಸಾಕಷ್ಟು ಜನರು ಹರಿಹಾಯ್ದಿದ್ದರು. ಕೆಲವರು ಅವರನ್ನು ಬೆಂಬಲಿಸಿದ್ದರು. ಈಗ ಈ ಫೋಟೋಶೂಟ್ನಿಂದ ರಣವೀರ್ ಸಿಂಗ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಎನ್ಜಿಒ ಸಂಸ್ಥೆಯೊಂದು ದೂರು ನೀಡಿದೆ. ರಣವೀರ್ ಸಿಂಗ್ ಅವರ ಈ ಫೋಟೋಶೂಟ್ನಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿದೆ ಎಂದು ಎನ್ಜಿಒನವರು ಆರೋಪಿಸಿದ್ದಾರೆ.
ರಣವೀರ್ ಸಿಂಗ್ ಅವರು ಸದಾ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಈ ಮೊದಲು ಚಿತ್ರ ವಿಚಿತ್ರ ಬಟ್ಟೆ ಧರಿಸಿ ಅವರು ಪಬ್ಲಿಕ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಬಟ್ಟೆ ಇಲ್ಲದೆ ಫೋಟೋಶೂಟ್ ಮಾಡಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಫೋಟೋಶೂಟ್ನಿಂದ ಅನೇಕರು ಮುಜುಗರಕ್ಕೆ ಒಳಗಾಗಿದ್ದರು. ಇನ್ನೂ ಕೆಲವರು ರಣವೀರ್ ಸಿಂಗ್ ತೆಗೆದುಕೊಂಡ ಬೋಲ್ಡ್ ಸ್ಟೆಪ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ.
ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಷನ್ ಈ ಬಗ್ಗೆ ದೂರು ದಾಖಲು ಮಾಡಿದೆ. ರಣವೀರ್ ಸಿಂಗ್ ಅವರು ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರಿಂದ ಮಹಿಳೆಯರ ಭಾವನೆಗೆ ಧಕ್ಕೆ ಆಗಿದೆ ಎಂದು ಈ ಎನ್ಜಿಒ ಸಂಸ್ಥೆಯವರು ದೂರಿನಲ್ಲಿ ಹೇಳಿದ್ದಾರೆ. ‘ನಾವು ವಾಕ್ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ, ಬೆತ್ತಲೆ ಫೋಟೋಗಳನ್ನು ಹಾಕುವುದನ್ನು ನಾವು ಖಂಡಿಸುತ್ತೇವೆ’ ಎಂದು ದೂರಿನಲ್ಲಿ ಹೇಳಲಾಗಿದೆ.
‘ನಟರನ್ನು ಭಾರತದಲ್ಲಿ ಹೀರೋಗಳು ಎಂದು ಕರೆಯಲಾಗುತ್ತದೆ. ಸಾಕಷ್ಟು ಮಂದಿ ಅವರನ್ನು ಹಿಂಬಾಲಿಸುತ್ತಾರೆ. ನಟರನ್ನು ಆರಾಧಿಸುವವರೂ ಇದ್ದಾರೆ. ಆದರೆ ರಣವೀರ್ ಸಿಂಗ್ ಅವರಂತಹ ನಟರು ಚೀಪ್ ಪಬ್ಲಿಸಿಟಿಗಾಗಿ ಈ ರೀತಿ ಬೆತ್ತಲೆ ಫೋಟೋಶೂಟ್ ಮಾಡಿಸುತ್ತಾರೆ. ಇದನ್ನು ಖಂಡಿಸಬೇಕು. ಈ ರೀತಿಯ ಫೋಟೋಗಳಿಂದ ಸಮಾಜವೇ ತಲೆಬಗ್ಗಿಸುವಂತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರರು ಕೋರಿದ್ದಾರೆ.
ರಣವೀರ್ ಸಿಂಗ್ ಪರವಾಗಿ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದರು. ಅವರು ಮಾಡಿದ್ದ ಫೋಟೋಶೂಟ್ ಸರಿ ಎಂದು ಅನೇಕರು ಹೊಗಳಿದ್ದರು. ಆದರೆ, ಈಗ ಈ ದೂರಿನಿಂದ ಅವರಿಗೆ ಸಂಕಷ್ಟ ಎದುರಾಗಿದೆ.