Kargil Vijay Diwas 2022: ಕಾರ್ಗಿಲ್ ಯುದ್ಧದ ನೆನಪು; ಈ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಬೇಡಿ
Indo-Pak war Movies: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧರ ಕುರಿತು ಅನೇಕ ಸಿನಿಮಾಗಳನ್ನು ತಯಾರಿಸಲಾಗಿದೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಆಯಾಮಗಳನ್ನು ಕಟ್ಟಿಕೊಡಲಾಗಿದೆ.
ದೇಶಭಕ್ತಿ ಕಥಾಹಂದರದ ಸಿನಿಮಾಗಳು ಸಾಕಷ್ಟು ಬಂದಿವೆ. ಅದರಲ್ಲೂ ಯುದ್ಧ, ಸೈನ್ಯ ಮತ್ತು ಯೋಧರ ಜೀವನಕ್ಕೆ ಸಂಬಂಧಿಸಿದ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ವಿಶೇಷ ಆಸಕ್ತಿ ತೋರಿಸಿದ್ದಾರೆ. ಇಂದು (ಜುಲೈ 26) ‘ಕಾರ್ಗಿಲ್ ವಿಜಯ್ ದಿವಸ’ (Kargil Vijay Diwas 2022) ಆಚರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ (Kargil War) ಮಡಿದ ಸೈನಿಕರಿಗೆ ನಮನ ಸಲ್ಲಿಸಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ ವೀರ ಯೋಧರ ತ್ಯಾಗ-ಬಲಿದಾನವನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಇಂಡಿಯಾ ಮತ್ತು ಪಾಕ್ ನಡುವಿನ ಯುದ್ಧದ (Indo-Pak war) ಘಟನೆಗಳನ್ನು ಆಧರಿಸಿ ಅನೇಕ ಸಿನಿಮಾಗಳು ಬಂದಿವೆ. ಆ ಪೈಕಿ ಕೆಲವು ಚಿತ್ರಗಳು ಸಖತ್ ಗಮನ ಸೆಳೆದಿವೆ. ಪ್ರೇಕ್ಷಕರು ನೋಡಲೇಬೇಕಾದ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..
ಶೇರ್ಷಾ: 2021ರಲ್ಲಿ ಈ ಸಿನಿಮಾ ಬಿಡುಗಡೆ ಆಯಿತು. ಕ್ಯಾಪ್ಟನ್ ವಿಕ್ರಮ್ ಭಾತ್ರ ಅವರ ಜೀವನದ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ. ವಿಕ್ರಮ್ ಭಾತ್ರ ಅವರ ಪಾತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಬಣ್ಣ ಹಚ್ಚಿದ್ದಾರೆ. ನೇರವಾಗಿ ‘ಅಮೇಜಾನ್ ಪ್ರೈಮ್ ವಿಡಿಯೋ’ ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರ ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿತು.
ಲಕ್ಷ್ಯ: ಹೃತಿಕ್ ರೋಷನ್ ಮುಖ್ಯಭೂಮಿಕೆ ನಿಭಾಯಿಸಿದ್ದ ಈ ಸಿನಿಮಾ 2004ರಲ್ಲಿ ತೆರೆಕಂಡಿತು. ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಹೆಣೆದ ಕಾಲ್ಪನಿಕ ಕಥೆಯುಳ್ಳ ಈ ಚಿತ್ರಕ್ಕೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಎಲ್ಒಸಿ- ಕಾರ್ಗಿಲ್: 2003ರಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಅಜಯ್ ದೇವಗನ್, ಸಂಜಯ್ ದತ್, ಅಮಿತಾಭ್ ಬಚ್ಚನ್, ನಾಗಾರ್ಜುನ, ಅಶುತೋಷ್ ರಾಣಾ, ಸೈಫ್ ಅಲಿ ಖಾನ್, ರವೀನಾ ಟಂಡನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಬಾರ್ಡರ್’ ಖ್ಯಾತಿಯ ಜೆ.ಪಿ. ದತ್ತ ಅವರು ‘ಎಲ್ಒಸಿ: ಕಾರ್ಗಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಧೂಪ್: ಯುದ್ಧದ ಕಥೆ ಕೇವಲ ರಣರಂಗದಲ್ಲಿ ಮುಗಿಯುವಂಥದ್ದಲ್ಲ. ಯೋಧರು ಮೃತರಾದ ಬಳಿಕ ಅವರ ಕುಟುಂಬದ ದುಸ್ಥಿತಿ ಹೇಗಿರುತ್ತದೆ ಎಂಬುದನ್ನು ‘ಧೂಪ್’ ಸಿನಿಮಾ ವಿವರಿಸುತ್ತದೆ. ಕ್ಯಾಪ್ಟನ್ ಅನುಜ್ ನಾಯರ್ ನಿಧನದ ನಂತರ ಅವರ ಕುಟುಂಬಕ್ಕೆ ಏನಾಯಿತು ಎಂಬುದನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.
ಗುಂಜನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್: ನಟಿ ಜಾನ್ವಿ ಕಪೂರ್ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ವಿಶೇಷವಾದದ್ದು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮೊದಲ ಮಹಿಳಾ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. 2020ರ ಆಗಸ್ಟ್ 14ರಂದು ಈ ಸಿನಿಮಾ ನೇರವಾಗಿ ನೆಟ್ಫ್ಲಿಕ್ಸ್ ತೆರೆಕಂಡಿತು.
Published On - 8:44 am, Tue, 26 July 22