Aadipurush: ಆದಿಪುರುಷ್ ಸಿನಿಮಾಕ್ಕೆ ಮತ್ತೊಂದು ಸಂಕಷ್ಟ, ಹಕ್ಕುಚ್ಯುತಿ ಆರೋಪ
ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಪ್ರಾರಂಭವಾದಾಗಿನಿಂದಲೂ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದೆ. ಇದೀಗ ಕಲಾವಿದ ಪ್ರತೀಕ್ ಎಂಬುವರು ಸಿನಿಮಾದ ಮೇಲೆ ಕೃತಿಚೌರ್ಯ ಆರೋಪ ಹೊರಿಸಿದ್ದಾರೆ.
ಪ್ರಭಾಸ್ (Prabhas) ನಟನೆಯ ಭಾರಿ ಬಜೆಟ್ ಸಿನಿಮಾ ಆದಿಪುರುಷ್ಗೆ (Adipurush) ಒಂದರ ಮೇಲೊಂದು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಸಿನಿಮಾ ಚಿತ್ರೀಕರಣ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆಗೆ ಈ ಸಿನಿಮಾ ಸಿಲುಕಿಕೊಳ್ಳುತ್ತಲೇ ಇದೆ. ಪ್ರಾರಂಭವಾದಾಗ ಭಾರಿ ನಿರೀಕ್ಷಿತ ಎನಿಸಿಕೊಂಡಿದ್ದ ಈ ಸಿನಿಮಾ, ಟ್ರೈಲರ್ ಬಿಡುಗಡೆ ಬಳಿಕ ಅತಿ ಹೆಚ್ಚು ಟ್ರೋಲ್ ಆದ ಟ್ರೈಲರ್ ಎಂಬ ಅಪಖ್ಯಾತಿಗೆ ಗುರಿಯಾಯಿತು. ಕೆಟ್ಟ ವಿಎಫ್ಎಕ್ಸ್, ಪೌರಾಣಿಕ ಪಾತ್ರಗಳನ್ನು ಇಷ್ಟಬಂದಂತೆ ತಿದ್ದಿರುವುದು ಇನ್ನೂ ಹಲವು ಆರೋಪಗಳು ಸಿನಿಮಾದ ಮೇಲೆ ಈಗಾಗಲೆ ಇವೆ, ಇದೀಗ ಕಲಾವಿದರೊಬ್ಬರು, ತಮ್ಮ ಚಿತ್ರಕಲೆಯನ್ನು ಆದಿಪುರುಷ್ ಚಿತ್ರತಂಡ ಕದ್ದಿದೆ ಎಂಬ ಆರೋಪ ಹೊರಿಸಿದ್ದಾರೆ.
ಕಾನ್ಸೆಪ್ಟ್ ಆರ್ಟಿಸ್ಟ್ ಪ್ರತೀಕ್ ಸಂಘರ್ ಎಂಬುವರು, ಆದಿಪುರುಷ್ ಸಿನಿಮಾದ ಪೋಸ್ಟರ್ಗೆ ಬಳಸಲಾಗಿರುವ ಡಿಸೈನ್ ತಮ್ಮದು ಎಂದಿದ್ದು, ಆದಿಪುರುಷ್ ಸಿನಿಮಾದ ವಿಷ್ಯುಲ್ ಡಿಸೈನರ್ ಟಿಪಿ ವಿಜಯನ್ ತಮ್ಮ ಡಿಸೈನ್ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಉದ್ದನೆಯ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿರುವ ಕಾನ್ಸೆಪ್ಟ್ ಆರ್ಟಿಸ್ಟ್ ಪ್ರತೀಕ್, ನಾನು ಭಾರತದ ಕಾನ್ಸೆಪ್ಟ್ ಆರ್ಟಿಸ್ಟ್. ರಾಮನ ಪರಿಕಲ್ಪನೆಯ ಚಿತ್ರವೊಂದನ್ನು ನಾನು ಒಂದು ವರ್ಷದ ಹಿಂದೆ ರಚಿಸಿದ್ದೆ. ಆದರೆ ಆದಿಪುರುಷ್ ಸಿನಿಮಾದ ವಿಷ್ಯುಲ್ ಡಿಸೈನ್ ತಂಡದವರು ನಾನು ರಚಿಸಿರುವ ಶ್ರೀರಾಮನ ಚಿತ್ರವನ್ನು ತೆಗೆದುಕೊಂಡು ಅದನ್ನು ತುಸು ತಿದ್ದಿ ತಮ್ಮ ಚಿತ್ರ ಎಂಬಂತೆ ಅದನ್ನು ಬಳಸಿದ್ದಾರೆ ಅದೂ ನನ್ನ ಒಪ್ಪಿಗೆ ಇಲ್ಲದೆ ಎಂದಿದ್ದಾರೆ.
ಆದಿಪುರುಷ್ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿರುವ ತಂತ್ರಜ್ಞರಿಗೆ ಈ ಪ್ರಾಜೆಕ್ಟ್ ಮೇಲೆ ಸ್ವಲ್ಪವೂ ಪ್ರೀತಿಯಾಗಲಿ, ಜವಾಬ್ದಾರಿಯಾಗಲಿ ಇಲ್ಲ. ಹಾಗಾಗಿಯೇ ಈ ಸಿನಿಮಾ ಫ್ಲಾಪ್ ಆಗುವ ಹಾದಿಯಲ್ಲಿದೆ. ಬೇರೆಯವರ ಕೆಲಸ ಕದ್ದು ಅದನ್ನು ತಿರುಚಿ ಬಳಸಿಕೊಳ್ಳುವುದು, ಶ್ರಮ ಹಾಕದೆ ಕಳಪೆ ಗುಣಮಟ್ಟದ ಕೆಲಸ ಮಾಡುವುದು ಇಂಥಹಾ ಕಾರ್ಯಗಳನ್ನೇ ಈ ಸಿನಿಮಾದ ತಂತ್ರಜ್ಞರು ಮಾಡುತ್ತಾ ಬಂದಿದ್ದಾರೆ. ನನ್ನ ಚಿತ್ರಗಳ ಲಿಂಕ್ಗಳನ್ನು ನಾನು ಪೋಸ್ಟ್ ಮಾಡಿದ್ದೇನೆ, ನಾನು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಆದಿಪುರುಷ್ ತಂಡವರು ಅವರ ಚಿತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ, ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಹಾಗಾಗಿ ನಾನು ಮೊದಲೇ ಅವರ ಚಿತ್ರಗಳನ್ನು ಸ್ಕ್ರೀನ್ ಶಾಟ್ ಮಾಡಿಟ್ಟುಕೊಂಡಿದ್ದೇನೆ ಎಂದಿದ್ದಾರೆ ಕಲಾವಿದ ಪ್ರತೀಕ್ ಸಂಘರ್. ಚಿತ್ರತಂಡದ ವಿರುದ್ಧ ಕಲಾವಿದ ಪ್ರತೀಕ್ ದೂರು ನೀಡಿದ್ದಾರೆ.
ಇದನ್ನೂ ಓದಿ: Adipurush: ‘ಆದಿಪುರುಷ್’ ಚಿತ್ರತಂಡದ ಮೇಲೆ ಬಿತ್ತು ಕೇಸ್; ರಾಮನ ಈ ಪೋಸ್ಟರ್ನಲ್ಲಿ ಅಂಥ ತಪ್ಪು ಏನಿದೆ?
ಆದಿಪುರುಷ್ ಸಿನಿಮಾವು ರಾಮಾಯಣದ ಕತೆಯನ್ನು ಆಧರಿಸಿದ ಸಿನಿಮಾ ಆಗಿದೆ. ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬಳಸಲಾಗಿರುವ ಕಳಪೆ ವಿಎಫ್ಎಕ್ಸ್ ಬಗ್ಗೆ ಹಾಗೂ ರಾಮ ಸೇರಿದಂತೆ ರಾವಣನ ಪಾತ್ರವನ್ನು ತಿದ್ದಿರುವ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ. ಸೀತಾಮಾತೆಯ ಉಡುಪಿನ ಬಗ್ಗೆ ನೆಟ್ಟಿಗರು ಟೀಕೆ ಮಾಡಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶಿಸಿದ್ದು, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್. ಸಿನಿಮಾವು ಜೂನ್ 16 ರಂದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ