ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್ನಲ್ಲಿ ಭದ್ರವಾಗಿ ನೆಲೆ ಊರಿದ್ದಾರೆ. ನಟ ರಣವೀರ್ ಸಿಂಗ್ ಅವರನ್ನು ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇಂದು (ಜನವರಿ 5) ದೀಪಿಕಾ ಬರ್ತ್ಡೇ (Deepika Padukone Birthday). ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ದೀಪಿಕಾಗೆ ವೃತ್ತಿಜೀವನದಲ್ಲಿ ಇತ್ತೀಚೆಗೆ ಹಿನ್ನಡೆ ಆಗಿದೆ. ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಈ ವರ್ಷ ಅವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಹಲವು ದೊಡ್ಡ ಬಜೆಟ್ನ ಚಿತ್ರಗಳು ಅವರ ಕೈಯಲ್ಲಿ ಇವೆ. ಈ ಪೈಕಿ ಯಾವ ಚಿತ್ರ ದೀಪಿಕಾಗೆ ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ದೀಪಿಕಾ ಅವರು 2018ರಲ್ಲಿ ನಟಿಸಿದ ‘ಪದ್ಮಾವತ್’ ಚಿತ್ರವೇ ಕೊನೆ. ಅದಾದ ಬಳಿಕ ಗೆಲುವು ಕಂಡಿಲ್ಲ. 2019ರಲ್ಲಿ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. 2020ರಲ್ಲಿ ರಿಲೀಸ್ ಆದ ‘ಚಪಾಕ್’ ಸಿನಿಮಾ ಸೋತಿತು. ಈ ಸಂದರ್ಭದಲ್ಲಿ ಅವರು ಜೆಎನ್ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಸಿನಿಮಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಈ ಚಿತ್ರ ಸೋಲಲು ದೀಪಿಕಾ ನಿರ್ಧಾರ ಕೂಡ ಕಾರಣ ಎನ್ನಲಾಗಿದೆ.
2022ರ ‘ಗೆಹರಾಯಿಯಾ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಹಸಿಬಿಸಿ ದೃಶ್ಯ ಹೆಚ್ಚಿದೆ ಎಂಬ ಕಾರಣಕ್ಕೆ ಅನೇಕರು ಚಿತ್ರವನ್ನು ಟೀಕೆ ಮಾಡಿದರು. ಈ ಕಾರಣಕ್ಕೆ ಸಿನಿಮಾಗೆ ಗೆಲುವು ಕಾಣಬೇಕಿದೆ. ಈಗ ಬರ್ತ್ಡೇ ತಿಂಗಳಲ್ಲಿ (ಜನವರಿ 25) ‘ಪಠಾಣ್’ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಈಗಾಗಲೇ ಅವರು ‘ಬೇಷರಂ ಸಾಂಗ್..’ನಲ್ಲಿ ಹಾಕಿದ ಕೇಸರಿ ಬಣ್ಣದ ಬಿಕಿನಿ ವಿವಾದ ಹುಟ್ಟುಹಾಕಿದೆ. ಹೀಗಾಗಿ, ಚಿತ್ರಕ್ಕೆ ಬೈಕಾಟ್ ಬಿಸಿ ತಾಗಿದೆ.
ಇದನ್ನೂ ಓದಿ: Jhoome Jo Pathaan: ‘ಪಠಾಣ್’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮಿಂಚಿಂಗ್
ಶಾರುಖ್ ನಟನೆಯ ‘ಜವಾನ್’ ಚಿತ್ರಕ್ಕೂ ದೀಪಿಕಾ ನಾಯಕಿ. ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಚಿತ್ರಕ್ಕೆ ದೀಪಿಕಾ ಹೀರೋಯಿನ್ ಆಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರದ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ‘ಫೈಟರ್’ ಹಾಗೂ ‘ಪ್ರಾಜೆಕ್ಟ್ ಕೆ’ 2024ರಲ್ಲಿ ರಿಲೀಸ್ ಆಗಲಿದೆ. ಉಳಿದಂತೆ ‘ಪಠಾಣ್’ ಹಾಗೂ ‘ಜವಾನ್’ ಈ ವರ್ಷ ರಿಲೀಸ್ ಆಗಲಿದೆ. ಈ ಪೈಕಿ ಯಾವುದು ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Thu, 5 January 23