ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಾಜೆಕ್ಟ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದೀಪಿಕಾ ನಟಿಸಿದ ‘ಚಪಾಕ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ‘83’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಆ ಸಿನಿಮಾ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ. ಈಗ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಜೊತೆ ‘ಪಠಾಣ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆ ಮತ್ತೊಂದು ಸುದ್ದಿ ಕೇಳಿಬಂದಿದೆ. ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ಅವರು ಪಾರ್ವತಿಯ (Parvati) ಪಾತ್ರ ಮಾಡುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಇದನ್ನು ಕೇಳಿ ದೀಪಿಕಾ ಪಡುಕೋಣೆ ಅಭಿಮಾನಿಗಳು ಎಗ್ಸೈಟ್ ಆಗಿದ್ದಾರೆ.
ರಣಬೀರ್ ಕಪೂರ್ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಮೂಡಿಬರಲಿದೆ. ಮೊದಲ ಪಾತ್ರದಲ್ಲಿ ಶಿವನ ಪಾತ್ರ ಹೈಲೈಟ್ ಆಗಲಿದೆ. ಎರಡನೇ ಪಾರ್ಟ್ನಲ್ಲಿ ಪಾರ್ವತಿ ಪಾತ್ರವೇ ಮುಖ್ಯವಾಗಿರಲಿದ್ದು, ಆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
‘ಬ್ರಹ್ಮಾಸ್ತ್ರ: ಪಾರ್ಟ್ 1: ಶಿವ’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರ ಪರಿಚಯಗೊಳ್ಳಲಿದೆ. ಅವರು ಪಾರ್ವತಿಯಾಗಿ ಕಾಣಿಸಿಕೊಳ್ಳುತ್ತಾರೆ. ಎರಡನೇ ಪಾರ್ಟ್ನಲ್ಲಿ ಅವರ ಪಾತ್ರವೇ ಲೀಡ್ ಆಗಿರುತ್ತದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲವಾದ್ದರಿಂದ ಅಭಿಮಾನಿಗಳು ಕಾದು ನೋಡುವುದೇ ಒಳಿತು. ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗುತ್ತಿದೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಜೋಡಿಯಾಗಿ ನಟಿಸಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ. ರಿಯಲ್ ಲೈಫ್ನಲ್ಲಿಯೂ ಇವರಿಬ್ಬರು ಜೋಡಿ ಆಗಿರುವುದು ವಿಶೇಷ.
ರಣಬೀರ್ ಕಪೂರ್ ಅವರ ಆಪ್ತ ಸ್ನೇಹಿತ ಅಯಾನ್ ಮುಖರ್ಜಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಮಿತಾಭ್ ಬಚ್ಚನ್, ನಾಗಾರ್ಜುನ ಅವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಳಪೆ ಗುಣಮಟ್ಟದ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ‘ಬ್ರಹ್ಮಾಸ್ತ್ರ’ ಟ್ರೇಲರ್ ಅನ್ನು ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ದೃಶ್ಯಗಳು ಇವೆ ಎಂಬ ಆರೋಪ ಕೂಡ ಎದುರಾಗಿತ್ತು.
Published On - 12:34 pm, Tue, 19 July 22