ಕೃಷ್ಣಮೃಗ ಬೇಟೆ ಪ್ರಕರಣ ಆಧಾರಿತ ‘ಕಾಲಾ ಹಿರಣ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

‘ಕಾಲಾ ಹಿರಣ್’ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ಮಂಡಳಿಯ ಹಸಿರು ನಿಶಾನೆ ಸಿಕ್ಕಿಲ್ಲ. ಅಲ್ಲದೇ, ಕಾನೂನು ಸಂಕಷ್ಟ ಎದುರಾಗಿರುವುದರಿಂದ ಚಿತ್ರದ ಬಿಡುಗಡೆಗೆ ಹಿನ್ನಡೆಯಾಗಿದೆ. ಸಿನಿಮಾವನ್ನು ಬಿಡುಗಡೆ ಮಾಡದಂತೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ಸಲ್ಮಾನ್ ಖಾನ್ ಅವರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣ ಆಧಾರಿತ ‘ಕಾಲಾ ಹಿರಣ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ
Kala Hiran Movie Poster

Updated on: Sep 10, 2026 | 9:26 PM

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತಗೊಂಡು ನಿರ್ಮಾಣವಾಗಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ ಸಿನಿಮಾದ ಬಿಡುಗಡೆಗೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಇನ್ನೂ ಸಿಗದ ಕಾರಣ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ಅಮಿತ್ ಜಾನಿ ಹಾಗೂ ಅವರ ಕಾನೂನು ತಂಡವು ಹೈಕೋರ್ಟ್‌ಗೆ ತಿಳಿಸಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.

ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸಿ, ತಮ್ಮ ಅನುಮತಿಯಿಲ್ಲದೆ ಈ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಅವರು ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಈ ಹಿಂದೆ ಜುಲೈ ತಿಂಗಳಿನಲ್ಲಿಯೂ ಹೈಕೋರ್ಟ್ ಈ ಚಿತ್ರದ ಟೀಸರ್ ಲಿಂಕ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಿತ್ತು. ಈ ಚಿತ್ರವು ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಪ್ರಕರಣ ಹಾಗೂ ಭೂಗತ ಜಗತ್ತಿನ ನಂಟನ್ನು ಬಿಂಬಿಸುತ್ತದೆ ಎಂದು ಹೇಳಲಾಗಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ಪರಾಗ್ ಖಂಧಾರ್ ಮಾತನಾಡಿ, ‘ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 30ಕ್ಕೆ ನಿಗದಿಯಾಗಿದೆ. ಆದ್ದರಿಂದ ಅಲ್ಲಿಯವರೆಗೆ ಈ ಸಿನಿಮಾವನ್ನು ಥಿಯೇಟರ್ ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡುವಂತಿಲ್ಲ. ನಿರ್ಮಾಪಕರು ಎರಡು ವಾರಗಳಲ್ಲಿ ತಮ್ಮ ಉತ್ತರವನ್ನು ಸಲ್ಲಿಸಬೇಕಾಗಿದೆ. ಸೆಪ್ಟೆಂಬರ್ 14ರಂದು ಚಿತ್ರದ ಸಂಭಾವ್ಯ ಬಿಡುಗಡೆ ದಿನಾಂಕವನ್ನು ತಿಳಿಸುವಂತೆಯೂ ಕೋರ್ಟ್ ಸೂಚಿಸಿದೆ’ ಎಂದು ವಿವರಿಸಿದ್ದಾರೆ.

ಬಿಡುಗಡೆಗೆ ಸೆನ್ಸಾರ್ ಮಂಡಳಿಯ ಹಸಿರು ನಿಶಾನೆ ಸಿಗದ ಕಾರಣ ಮತ್ತು ಕಾನೂನು ಸಂಕಷ್ಟ ಎದುರಾಗಿರುವುದರಿಂದ ‘ಕಾಲಾ ಹಿರಣ್’ ಚಿತ್ರದ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಿರ್ಮಾಪಕರ ಮುಂದಿನ ನಡೆ ಏನಾಗಿರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ: ಸಲ್ಮಾನ್ ಖಾನ್‌ಗೆ ರಿಲೀಫ್

‘ಕಾಲಾ ಹಿರಣ್’ ಟೀಸರ್‌ನಲ್ಲೇನಿತ್ತು?

‘ಕಾಲಾ ಹಿರಣ್’ ಚಿತ್ರತಂಡ ಈ ಹಿಂದೆ ಹಂಚಿಕೊಂಡಿದ್ದ ಸಣ್ಣ ಟೀಸರ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. 1998ರ ರಾಜಸ್ಥಾನದ ಕೃಷ್ಣಮೃಗ ಬೇಟೆ ಪ್ರಕರಣ, ಅದರಿಂದ ಸಲ್ಮಾನ್ ಖಾನ್ ಎದುರಿಸಿದ ಕಾನೂನು ಸಂಕಷ್ಟ, ಭೂಗತ ಜಗತ್ತಿನ ಬೆದರಿಕೆಗಳ ಪ್ರಸಂಗಗಳನ್ನು ಟೀಸರ್‌ನಲ್ಲಿ ಚಿತ್ರಿಸಲಾಗಿತ್ತು. ಸಲ್ಮಾನ್ ಖಾನ್ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ರೀತಿಯಲ್ಲಿ ಈ ಟೀಸರ್ ಮೂಡಿಬಂದಿದೆ ಎಂದು ನಟನ ಕಾನೂನು ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us