ಸಂಕಷ್ಟದಲ್ಲಿ ಎಆರ್ ರೆಹಮಾನ್, 2 ಕೋಟಿ ದಂಡ ವಿಧಿಸಿದ ದೆಹಲಿ ಹೈಕೋರ್ಟ್
AR Rahman: ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎನಿಸಿಕೊಂಡಿರುವ ಎಆರ್ ರೆಹಮಾನ್ ಅವರ ಒಂದು ಹಾಡು ಈಗ ವಿವಾದಕ್ಕೆ ಕಾರಣವಾಗಿದೆ. ರೆಹಮಾನ್ ಕಂಪೋಸ್ ಮಾಡಿರುವ ಹಾಡಿನ ಮೇಲೆ ಕೃತಿಚೌರ್ಯ ಆರೋಪ ಮಾಡಲಾಗಿತ್ತು. ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಎಆರ್ ರೆಹಮಾನ್ ವಿರುದ್ಧ ಆದೇಶ ಹೊರಡಿಸಿದ್ದು, ಎರಡು ಕೋಟಿ ದಂಡ ವಿಧಿಸಿದೆ.

ಮಣಿರತ್ನಂ (Mani Ratnam) ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದ ಹಾಡೊಂದರ ಬಗ್ಗೆ ಹೂಡಲಾಗಿದ್ದ ದಾವೆಯಲ್ಲಿ ಸಿನಿಮಾ ನಿರ್ಮಾಪಕರಿಗೆ ಮತ್ತು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರಿಗೆ ಹಿನ್ನಡೆ ಉಂಟಾಗಿದೆ. ಎಆರ್ ರೆಹಮಾನ್, ಬೇರೆ ಹಾಡೊಂದರ ರಾಗ, ಸಂಗೀತವನ್ನು ಕೃತಿಚೌರ್ಯ ಮಾಡಿರುವ ಆರೋಪ ಸಾಬೀತಾಗಿದ್ದು ಎರಡು ಕೋಟಿ ರೂಪಾಯಿ ದಂಡವನ್ನು ಹೈಕೋರ್ಟ್ ವಿಧಿಸಿದೆ.
‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಜಯಂ ರವಿ ಮತ್ತು ಶೋಭಿತಾ ಧುಲಿಪಾಲ ನಡುವೆ ‘ವೀರ ರಾಜ ವೀರ’ ಎಂಬ ಹಾಡೊಂದು ಇದೆ. ಈ ಹಾಡಿನ ವಿರುದ್ಧ ಉಸ್ತಾದ್ ಫಯಾಜ್ ಡಾಗರ್ ಎಂಬುವರು ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪದ ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ‘ವೀರ ರಾಜ ವೀರ’ ಹಾಡನ್ನು ಶಿವ ಸ್ತುತಿಯಿಂದ ಕದ್ದಿದ್ದು, ಶಿವ ಸ್ತುತಿಯನ್ನು ತಮ್ಮ ತಂದೆ ಮತ್ತು ತಮ್ಮ ಚಿಕ್ಕಪ್ಪನವರು ಕಂಪೋಸ್ ಮಾಡಿದ್ದರು, ಅದರ ರಾಗ, ಸಂಗೀತ, ಬೀಟ್ಗಳನ್ನು ಸಹ ಯಾವುದೇ ಬದಲಾವಣೆ ಇಲ್ಲದೆ ಬಳಸಿಕೊಂಡಿದ್ದಾರೆ’ ಎಂದು ಉಸ್ತಾದ್ ಫಯಾಜ್ ಆರೋಪಿಸಿದ್ದಾರೆ.
ದೂರಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಎಆರ್ ರೆಹಮಾನ್ ಅವರಿಗೆ ಎರಡು ಕೋಟಿ ರೂಪಾಯಿ ದಂಡವನ್ನು ಹೇರಿದೆ ಅದರ ಜೊತೆಗೆ ಕೋರ್ಟ್ ಕಪಾಲದ ಖರ್ಚಿಗೆ ಎರಡು ಲಕ್ಷ ರೂಪಾಯಿಯನ್ನು ಹೆಚ್ಚುವರಿಯಾಗಿ ಡಾಗರ್ ಕುಟುಂಬಕ್ಕೆ ನೀಡಬೇಕು ಎಂದಿದೆ. ಇದರ ಜೊತೆಗೆ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಯಾವೆಲ್ಲ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆಯೋ ಅಲ್ಲೆಲ್ಲ ಮೂಲ ಹಾಡಿನ ಸಂಗೀತ ನಿರ್ದೇಶಕರ ಹೆಸರುಗಳನ್ನು ಸೇರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ:ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನಕ್ಕೆ ಕೊನೆಗೂ ಸಿಕ್ಕಿತು ಕಾರಣ
ಶಿವಸ್ತುತಿಯನ್ನು ಉಸ್ತಾದ್ ಫೈಯಾಜುದ್ದೀನ್ ಮತ್ತು ಉಸ್ತಾದ್ ಜಹೀರುದ್ಧೀನ್ ಅವರುಗಳು ಕಂಪೋಸ್ ಮಾಡಿದ್ದರು. ಮೂಲ ಹಾಡಿನ ಸಂಗೀತ, ಬೀಟ್, ರಾಗ, ಹಿನ್ನೆಲೆ ಸಂಗೀತವನ್ನು ಎಆರ್ ರೆಹಮಾನ್, ತಮ್ಮ ಹಾಡಿನಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದಾರೆ. ಮೂಲ ರಾಗ ಸಂಯೋಜಕರ ಹೆಸರನ್ನು ಸಹ ಉಲ್ಲೇಖಿಸಿಲ್ಲ. ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಅನ್ನು ಮಣಿರತ್ನಂ ನಿರ್ದೇಶನ ಮಾಡಿದ್ದು, ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಎರಡೂ ಭಾಗಗಳಿಗೆ ಅವರೇ ಸಂಗೀತ ನೀಡಿದ್ದು ಎರಡು ಭಾಗಗಳಲ್ಲಿ ಹಲವು ಹಾಡುಗಳನ್ನು ಅವರು ಕಂಪೋಸ್ ಮಾಡಿದ್ದರು. ಅದರಲ್ಲಿ ಒಂದು ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಹೊರಿಸಲಾಗಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




