ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ (Pathaan Movie) ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಜನವರಿ 25ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಕೂಡ ಸಿಕ್ಕಿದ್ದು, ಇನ್ನು ಯಾವುದೇ ಕೆಲಸಗಳು ಬಾಕಿ ಉಳಿದುಕೊಂಡಿಲ್ಲ. ಆದರೆ ಈ ಅಂತಿಮ ಹಂತದಲ್ಲಿ ದೆಹಲಿ ಹೈಕೋರ್ಟ್ನಿಂದ (Delhi High Court) ಹೊಸ ಆದೇಶ ಬಂದಿದೆ. ‘ಪಠಾಣ್’ ಚಿತ್ರಕ್ಕೆ ಆಡಿಯೋ ವಿವರಣೆ ಮತ್ತು ಹಿಂದಿ ಭಾಷೆಯ ಸಬ್ಟೈಟಲ್ ಅಳವಡಿಸುವಂತೆ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಿಕಲಚೇತನ (Persons with Disabilities) ಪ್ರೇಕ್ಷಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
ಕಿವಿ ಕೇಳಿಸದ ಪ್ರೇಕ್ಷಕರು ಸಿನಿಮಾ ನೋಡುವಾಗ ಇಂಗ್ಲಿಷ್ ಸಬ್ಟೈಟಲ್ ಬದಲು ಮೂಲ ಭಾಷೆಯಲ್ಲಿ ಸಬ್ಟೈಟಲ್ ಇದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಅದೇ ರೀತಿ, ಕಣ್ಣು ಕಾಣಿಸದ ಪ್ರೇಕ್ಷಕರಿಗೆ ಆಡಿಯೋ ಡಿಸ್ಕ್ರಿಪ್ಷನ್ ಇದ್ದರೆ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ವಿಕಲಚೇತನರ ಹಕ್ಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿಲಾಗಿದೆ. ಈ ಸಂಬಂಧ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ಗೆ ದೆಹಲಿ ಹೈಕೋರ್ಟ್ ಈ ರೀತಿ ಆದೇಶ ನೀಡಿದೆ.
ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್ ಖಾನ್
ಎಲ್ಲ ಸಿನಿಮಾಗಳಿಗೂ ಈ ರೀತಿ ಸಬ್ಟೈಟಲ್ ಮತ್ತು ಆಡಿಯೋ ಡಿಸ್ಕ್ರಿಪ್ಷನ್ ಅಳವಡಿಸಬೇಕು ಎಂಬ ಆದೇಶವಿದೆ. ಆದರೆ ಅದನ್ನು ಯಾರೂ ಕೂಡ ಸರಿಯಾಗಿ ಪಾಲಿಸುತ್ತಿಲ್ಲ. ‘ಪಠಾಣ್’ ಸಿನಿಮಾದ ಬಿಡುಗಡೆಯ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಆದರೆ ಈ ಸಿನಿಮಾದ ರಿಲೀಸ್ಗೆ ಇನ್ನು ಕೆಲವೇ ದಿನಗಳು ಇರುವುದರಿಂದ ಚಿತ್ರಮಂದಿರದಲ್ಲಿ ಇಷ್ಟೆಲ್ಲ ಅಳವಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಬದಲು ಒಟಿಟಿ ವರ್ಷನ್ನಲ್ಲಿ ಈ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: Shah Rukh Khan: ಎಷ್ಟೇ ವಿರೋಧ ಬಂದ್ರೂ ಜಗ್ಗದ ಶಾರುಖ್ ಖಾನ್; ‘ಪಠಾಣ್’ ಟೈಟಲ್ ಬದಲಾಗಬೇಕು ಎಂದವರಿಗೆ ಇಲ್ಲಿದೆ ಉತ್ತರ
ಏಪ್ರಿಲ್ ತಿಂಗಳ ವೇಳೆಗೆ ‘ಪಠಾಣ್’ ಸಿನಿಮಾ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಒಟಿಟಿಗೆ ಬರುವ ಸಾಧ್ಯತೆ ಇದೆ. ಚಿತ್ರತಂಡದವರು ಇನ್ನೆರಡು ವಾರದಲ್ಲಿ ಆಡಿಯೋ ಡಿಸ್ಕ್ರಿಪ್ಷನ್ ಮತ್ತು ಸಬ್ಟೈಟಲ್ ಸಿದ್ಧಪಡಿಸಿ ಫೆಬ್ರವರಿ 20ರೊಳಗೆ ಸೆನ್ಸಾರ್ ಮಂಡಳಿಗೆ ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:38 pm, Mon, 16 January 23