ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅವರಿಗೆ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಹಳ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸೂಚಿಸಿದ್ದಾರೆ. ಶಿವಣ್ಣ ಮೆಚ್ಚಿದ್ದಕ್ಕೆ ನಿರ್ದೇಶಕ ಆದಿತ್ಯ ಧರ್ ಅವರಿಗೆ ತುಂಬಾ ಖುಷಿಯಾಗಿದೆ. ಅವರು ಪ್ರತಿಕ್ರಿಯಿಸಿದ್ದಾರೆ.

ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್
Aditya Dhar, Shiva Rajkumar

Updated on: Mar 26, 2026 | 3:22 PM

‘ಧುರಂಧರ್ 2’ (Dhurandhar 2) ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಈ ಸಿನಿಮಾ ನೋಡಿರುವ ಶಿವರಾಜ್​ಕುಮಾರ್ (Shivarajkumar) ಅವರು ಮೆಚ್ಚಿಕೊಂಡಿದ್ದಾರೆ. ಎಕ್ಸ್ (ಟ್ವಿಟರ್) ಮೂಲಕ ಶಿವಣ್ಣ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ರಣವೀರ್ ಸಿಂಗ್ ಅವರ ನಟನೆ, ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಶಿವಣ್ಣ ಭೇಷ್ ಎಂದಿದ್ದಾರೆ. ಇದರಿಂದಾಗಿ ‘ಧುರಂಧರ್ 2’ ಚಿತ್ರತಂಡಕ್ಕೆ ಬಲ ಹೆಚ್ಚಿದಂತಾಗಿದೆ. ಶಿವರಾಜ್​ಕುಮಾರ್ ಅವರ ವಿಮರ್ಶೆಗೆ ಆದಿತ್ಯ ಧರ್ (Aditya Dhar) ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ಈ ಮಾತುಗಳಿಗೆ ಧನ್ಯವಾದಗಳು ಸರ್. ನಿಮ್ಮಿಂದ ಈ ಮೆಚ್ಚುಗೆ ಬರುತ್ತಿರುವುದು ನಿಜಕ್ಕೂ ಬಹಳಷ್ಟು ಅರ್ಥಪೂರ್ಣವಾಗಿದೆ. ಪ್ರಾಮಾಣಿಕತೆ ಮತ್ತು ದೃಢನಿಶ್ಚಯದಿಂದ ಕಥೆಗಳನ್ನು ಹೇಳುವುದನ್ನು ಮುಂದುವರಿಸಲು ನಿಮ್ಮ ಬೆಂಬಲವು ನಮಗೆ ಪ್ರೋತ್ಸಾಹ ನೀಡುತ್ತದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದು ಆದಿತ್ಯ ಧರ್ ಅವರು ಟ್ವೀಟ್ ಮಾಡಿದ್ದಾರೆ.

ಶಿವಣ್ಣ ಹೇಳಿದ್ದೇನು?

‘ಧುರಂಧರ್: ದಿ ರಿವೇಂಜ್’ ಸಿನಿಮಾ ಬಹಳ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಅಂಶ ಕೂಡ ಇಷ್ಟ ಆಯಿತು. ರಣವೀರ್ ಸಿಂಗ್ ಬ್ರಿಲಿಯಂಟ್. ಹಳೇ ಸಾಂಗ್ ಬಳಸಿಕೊಂಡಿರುವ ಸಂಗೀತ ನಿರ್ದೇಶಕ ಶಾಶ್ವತ್ ಸಚ್​ದೇವ್ ಅವರ ಕೆಲಸ ಪರಿಣಾಮಕಾರಿ ಆಗಿದೆ. ನಿರ್ದೇಶಕ ಆದಿತ್ಯ ಧರ್ ಅವರ ಕೆಲಸಕ್ಕೆ ಗೌರವ ಸಲ್ಲಬೇಕು. ಸೈನಿಕನ ದೇಶಭಕ್ತಿಯೇ ಈ ಸಿನಿಮಾದ ಜೀವಾಳ. ಇಡೀ ಧುರಂಧರ್ 2 ಚಿತ್ರತಂಡಕ್ಕೆ ಅಭಿನಂದನೆಗಳು’ ಎಂದು ಶಿವರಾಜ್​ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಿಂದೆ ‘ಧುರಂಧರ್’ ಮೊದಲ ಭಾಗವನ್ನು ವೀಕ್ಷಿಸಿದ್ದಾಗಲೂ ಶಿವರಾಜ್​ಕುಮಾರ್ ಅವರು ಹೊಗಳಿದ್ದರು. ‘ರಣವೀರ್ ಸಿಂಗ್ ಅವರು ಮಾಡಿದ ಪಾತ್ರ ಸುಲಭವಲ್ಲ. ಅದನ್ನು ಅವರು ಬಹಳ ಬ್ರಿಲಿಯಂಟ್ ಆಗಿ ನಿಭಾಯಿಸಿದ್ದಾರೆ’ ಎಂದು ಶಿವರಾಜ್​ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂಬೈನಲ್ಲಿ ನಡೆದ ‘45’ ಸಿನಿಮಾದ ಸುದ್ದಿಗೋಷ್ಠಿ ವೇಳೆ ಅವರು ಈ ಮಾತು ಹೇಳಿದ್ದರು.

ಇದನ್ನೂ ಓದಿ: ‘ನಮ್ಮದು ಧುರಂಧರ್ ರೀತಿ ವಯಸ್ಕರ ಸಿನಿಮಾ ಅಲ್ಲ’: ಅಕ್ಷಯ್ ಕುಮಾರ್ ಹೀಗೆ ಹೇಳಿದ್ದು ಯಾಕೆ?

ರಣವೀರ್ ಸಿಂಗ್ ಜತೆ ‘ಧುರಂಧರ್ 2’ ಸಿನಿಮಾದಲ್ಲಿ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಕಬೀರ್ ಬೇಡಿ, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರಿಷಬ್ ಶೆಟ್ಟಿ, ರಜನಿಕಾಂತ್, ಅಲ್ಲು ಅರ್ಜುನ್, ಮಹೇಶ್ ಬಾಬು, ರಾಮ್ ಚರಣ್, ರಾಜಮೌಳಿ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us