ಸೋಮವಾರವೂ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಧುರಂಧರ್’; ರಣವೀರ್​ಗೆ ದೊಡ್ಡ ಗೆಲುವು

ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ನೆಗೆಟಿವ್ ಟಾಕ್ ಮತ್ತು ದೀರ್ಘ ಅವಧಿಯ ನಡುವೆಯೂ, ಮೂರೇ ದಿನದಲ್ಲಿ 100 ಕೋಟಿ ರೂ. ಗಳಿಸಿ ಬಾಲಿವುಡ್‌ಗೆ ಹೊಸ ಚೈತನ್ಯ ನೀಡಿದೆ. ಇದು ರಣವೀರ್ ವೃತ್ತಿಜೀವನದ ದೊಡ್ಡ ಹಿಟ್ ಆಗುವ ನಿರೀಕ್ಷೆಯಿದೆ. ಡಿಸೆಂಬರ್ ರಜೆಗಳು ಚಿತ್ರಕ್ಕೆ ಲಾಭ ತಂದುಕೊಟ್ಟಿವೆ.

ಸೋಮವಾರವೂ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಧುರಂಧರ್’; ರಣವೀರ್​ಗೆ ದೊಡ್ಡ ಗೆಲುವು
ರಣವೀರ್ ಸಿಂಗ್

Updated on: Dec 09, 2025 | 7:02 AM

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿರಲಿಲ್ಲ. ಈಗ ‘ಧುರಂಧರ್’ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ನೆಗೆಟಿವ್ ಟಾಕ್, ಸಿನಿಮಾದ ದೀರ್ಘ ಅವಧಿ ನಡುವೆಯೂ ಚಿತ್ರ ಗೆದ್ದು ಬೀಗಿದೆ. ಬಾಲಿವುಡ್ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿರುವಾಗ ‘ಧುರಂಧರ್’ ಸಿನಿಮಾ ರಿಲೀಸ್ ಆಗಿ ಹೊಸ ಚೈತನ್ಯ ನೀಡಿದೆ. ಈ ಚಿತ್ರದಿಂದ ತಂಡ ಲಾಭ ಕಾಣುವ ನಿರೀಕ್ಷೆ ಇದೆ.

‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಡಿಸೆಂಬರ್​ನಲ್ಲಿ ದೊಡ್ಡ ಬಜೆಟ್ ಚಿತ್ರಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹೆಚ್ಚು ಆದ್ಯತೆ ನೀಡುತ್ತಾರೆ. ಇದಕ್ಕೆ ಕಾರಣ ಕ್ರಿಸ್​ಮಸ್ ಹಾಗೂ ಹೊಸ ವರ್ಷದ ರಜೆಗಳು. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. ಸೋಮವಾರವೂ ‘ಧುರಂಧರ್’ ಡಬಲ್ ಅಂಕಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ಪಾಸ್ ಆಗಿದೆ.

ಧುರಂಧರ್ ಸಿನಿಮಾ ಮೊದಲ ದಿನ 23 ಕೋಟಿ ರೂಪಾಯಿ, ಶನಿವಾರ 32 ಕೋಟಿ ರೂಪಾಯಿ ಹಾಗೂ ಭಾನುವಾರ 43 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಮೂರೇ ದಿನಕ್ಕೆ ಚಿತ್ರ ನೂರು ಕೋಟಿ ರೂಪಾಯಿ ಗಳಿಸಿದೆ. ಸೋಮವಾರದ ಕಲೆಕ್ಷನ್ ಸರಿ ಸುಮಾರು 23 ಕೋಟಿ ರೂಪಾಯಿ ಎಂದು sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 126 ಕೋಟಿ ರೂಪಾಯಿ ಆಗಿದೆ.

ಬಾಲಿವುಡ್ ಚಿತ್ರಗಳು ಸತತವಾಗಿ ಸೋಲುತ್ತಿರುವ ಈ ಸಂದರ್ಭದಲ್ಲಿ ಹಿಂದಿ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಗೆದ್ದಿರೋದು ಖುಷಿಯ ಸಂಗತಿ. ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರ ಸಾಕಷ್ಟು ಶೋಗಳನ್ನು ಬಾಚಿಕೊಂಡಿದೆ.

ಇದನ್ನೂ ಓದಿ: ಅಬ್ಬಬಾ,‘ಧುರಂಧರ್’ ಭಾನುವಾರದ ಗಳಿಕೆ ಇಷ್ಟೊಂದಾ? ಕೊನೆಗೂ ಗೆದ್ದ ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾ ರಿಲೀಸ್​ಗೂ ಮೊದಲು ದೈವವನ್ನು ಅನುಕರಿಸಲು ಹೋಗಿ ಪೇಚಿಗೆ ಸಿಲುಕಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಯಿತು. ಆ ಬಳಿಕ ಸಿನಿಮಾದ ಅವಧಿ (3 ಗಂಟೆ 36 ನಿಮಿಷ) ಬಗ್ಗೆ ಚರ್ಚೆ ಆಯಿತು. ಸಿನಿಮಾಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರಕ್ಕೆ ಹಿನ್ನಡೆ ಆಯಿತು. ಇವೆಲ್ಲದರ ಮಧ್ಯೆ ಸಿನಿಮಾ ಗೆದ್ದಿದೆ. ರಣವೀರ್ ಸಿಂಗ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ ಇದಾಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.