‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

‘ಧುರಂಧರ್’ ಸಿನಿಮಾದಲ್ಲಿ ಲಿಯಾರಿ ಪಟ್ಟಣವನ್ನು ತೋರಿಸಿದ ರೀತಿ ಬಗ್ಗೆ ಪಾಕಿಸ್ತಾನಕ್ಕೆ ಅಸಮಾಧಾನ ಇದೆ. ಹಾಗಾಗಿ ‘ಮೇರಾ ಲಿಯಾರಿ’ ಎಂಬ ಹೊಸ ಸಿನಿಮಾ ಮಾಡಿ ತಿರುಗೇಟು ನೀಡಲು ಪಾಕ್ ಸಜ್ಜಾಗಿದೆ. ಈ ಸಿನಿಮಾ ಮೇ 8ರಂದು ಬಿಡುಗಡೆ ಆಗಲಿದೆ. ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ
Dhurandhar, Mera Lyari

Updated on: Apr 26, 2026 | 2:20 PM

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ (Dhurandhar) ಫ್ರಾಂಚೈಸಿ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿ ದಾಖಲೆ ಬರೆದಿವೆ. ಆದರೆ, ಈ ಚಿತ್ರದಲ್ಲಿ ತೋರಿಸಲಾದ ಪಾಕಿಸ್ತಾನದ ಲಿಯಾರಿ (Lyari) ಪಟ್ಟಣದ ಚಿತ್ರಣ ಈಗ ಎರಡು ದೇಶಗಳ ನಡುವೆ ಸಿನಿಮಾ ಸಮರಕ್ಕೆ ನಾಂದಿ ಹಾಡಿದೆ. ‘ಧುರಂಧರ್’ ಸಿನಿಮಾಗೆ ತಿರುಗೇಟು ನೀಡಲು ಪಾಕಿಸ್ತಾನದಲ್ಲಿ ‘ಮೇರಾ ಲಿಯಾರಿ’ (Mera Lyari) ಎಂಬ ಹೊಸ ಸಿನಿಮಾ ಮಾಡಲಾಗಿದೆ.

ನಿರ್ದೇಶಕ ಆದಿತ್ಯ ಧರ್ ಅವರ ಈ ಸ್ಪೈ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗೂಢಚಾರನಾಗಿ ಕಾಣಿಸಿಕೊಂಡಿದ್ದಾರೆ. 2005ರಿಂದ 2022ರ ಕಾಲಘಟ್ಟದಲ್ಲಿ ಲಿಯಾರಿಯಲ್ಲಿ ನಡೆದ ಗ್ಯಾಂಗ್ ವಾರ್, ಭೂಗತ ಲೋಕದ ಚಟುವಟಿಕೆಗಳು ಮತ್ತು ಉಗ್ರರ ಜಾಲವನ್ನು ಧ್ವಂಸ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ರೆಹಮಾನ್ ಬಲೋಚ್, ಉಜೈರ್ ಬಲೋಚ್ ಮತ್ತು ದಾವೂದ್ ಇಬ್ರಾಹಿಂ ಮುಂತಾದ ನೈಜ ಪಾತ್ರಗಳನ್ನು ಆಧರಿಸಿದ ಈ ಚಿತ್ರವು ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಆದರೆ ಈ ಕಥೆ ಬಗ್ಗೆ ಪಾಕಿಸ್ತಾನಕ್ಕೆ ಅಸಮಾಧಾನ ಇದೆ.

ಲಿಯಾರಿ ಪಟ್ಟಣವನ್ನು ಕೇವಲ ಅಪರಾಧದ ತಾಣವಾಗಿ, ಅರಾಜಕತೆಯಿಂದ ಕೂಡಿದ ಪ್ರದೇಶವಾಗಿ ಭಾರತೀಯ ಸಿನಿಮಾಗಳು ಬಿಂಬಿಸುತ್ತಿವೆ ಎಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಸಿಂಧ್ ಪ್ರಾಂತ್ಯದ ಮಾಹಿತಿ ಸಚಿವ ಶರ್ಜೀಲ್ ಮೆಮನ್, ‘ಧುರಂಧರ್ ಸಿನಿಮಾವು ಪಾಕಿಸ್ತಾನದ ವಿರುದ್ಧ ಭಾರತ ಮಾಡುತ್ತಿರುವ ಅಪಪ್ರಚಾರ. ಇದಕ್ಕೆ ನಾವು ಸಿನಿಮಾ ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಗುಡುಗಿದ್ದಾರೆ.

ಭಾರತದ ‘ಧುರಂಧರ್’ ಸಿನಿಮಾಗೆ ತಿರುಗೇಟು ನೀಡಲು ಪಾಕಿಸ್ತಾನ ಈಗ ‘ಮೇರಾ ಲಿಯಾರಿ’ ಸಿನಿಮಾವನ್ನು ಸಿದ್ಧಪಡಿಸಿದೆ. ಅಬು ಅಲೀಹಾ ನಿರ್ದೇಶನದ ಈ ಚಿತ್ರವು ಕ್ರೀಡಾ ಆಧಾರಿತ ಸಿನಿಮಾವಾಗಿದ್ದು, ಲಿಯಾರಿಯ ಹೆಣ್ಣುಮಕ್ಕಳ ಫುಟ್‌ಬಾಲ್ ಕ್ರೇಜ್ ಹೇಗಿದೆ ಎಂಬುದನ್ನು ತೋರಿಸಲಿದೆ. ಆಯೆಷಾ ಒಮರ್, ದನಾನೀರ್ ಮೊಬೀನ್ ಮುಂತಾದವರು ಇದರಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ

‘ಮೇರಾ ಲಿಯಾರಿ’ ಚಿತ್ರವು ಮೊದಲು ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ಮೇ 8ರಂದು ಪಾಕಿಸ್ತಾನದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಸಿನಿಮಾದ ಮೂಲಕ ಶುರುವಾದ ಈ ಲಿಯಾರಿ ಸಂಘರ್ಷ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಸಿಗತ್ತಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us