ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗುತ್ತಿಲ್ಲ. ಅವರು ನಟಿಸಿದ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ. ಈ ನಡುವೆ ಅವರು ರಾಜಕೀಯಕ್ಕೆ (Politics) ಎಂಟ್ರಿ ನೀಡುತ್ತಾರಾ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಬಿಜೆಪಿ (BJP) ಸರ್ಕಾರಕ್ಕೆ ಅವರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ಕಂಗನಾ ಬಿಜೆಪಿ ಸೇರ್ಪಡೆ ಆಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ಕಂಗನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದಲ್ಲಿ ತಮಗೆ ಆಸಕ್ತಿ ಇರುವುದು ಹೌದು, ಆದರೆ ಸದ್ಯಕ್ಕೆ ಎಲೆಕ್ಷನ್ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಂಗನಾ ರಣಾವತ್ ಅವರು ಸಿನಿಮಾ ಮಾಡಿದ್ದಕ್ಕಿಂತಲೂ ವಿವಾದ ಮಾಡಿಕೊಂಡಿದ್ದೇ ಹೆಚ್ಚು. ರಾಜಕೀಯದ ಅನೇಕ ವಿಚಾರಗಳಲ್ಲಿ ಅವರು ತಲೆ ಹಾಕುತ್ತಾರೆ. ಅವರ ಮಾತುಗಳನ್ನು ಕೆಲವರು ವಿರೋಧಿಸುತ್ತಾರೆ, ಕೆಲವರು ಬೆಂಬಲಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲ ಕಾರ್ಯಗಳಿಗೆ ಕಂಗನಾ ಮೆಚ್ಚುಗೆ ಸೂಚಿಸುತ್ತಾರೆ. ಈ ಕಾರಣಕ್ಕಾಗಿ ಅವರು ಬಿಜೆಪಿ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹೆ ಅನೇಕರದ್ದಾಗಿದೆ. ಆದರೆ ಅದನ್ನು ಕಂಗನಾ ಅಲ್ಲಗಳೆದಿದ್ದಾರೆ.
‘ಸದ್ಯ ರಾಜಕೀಯಕ್ಕೆ ಪ್ರವೇಶಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನನಗೆ ಆಸಕ್ತಿ ಇಲ್ಲ. ನಟಿಯಾಗಿ ನನಗೆ ಭಾರತದ ರಾಜಕೀಯದಲ್ಲಿ ಆಸಕ್ತಿ ಇದೆ. ಮುಂದಿನ ದಿನಗಳಲ್ಲಿ ರಾಜಕೀಯದ ಕುರಿತು ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಆ ಮೂಲಕ ಸದ್ಯಕ್ಕಂತೂ ತಾವು ರಾಯಕೀಯಕ್ಕೆ ಎಂಟ್ರಿ ನೀಡುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ರಾಜಕಾರಣಿಗಳ ಕುರಿತು ಸಿನಿಮಾ ಮಾಡುವಲ್ಲಿ ಕಂಗನಾ ರಣಾವತ್ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಜಯಲಲಿತಾ ಅವರ ಜೀವನಾಧಾರಿತ ‘ತಲೈವಿ’ ಸಿನಿಮಾದಲ್ಲಿ ಕಂಗನಾ ನಟಿಸಿದ್ದರು. ಆ ಚಿತ್ರ 2021ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿ ಹೀನಾಯವಾಗಿ ಸೋಲುಂಡಿತು. ಈಗ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
‘ಎಮರ್ಜೆನ್ಸಿ’ ಚಿತ್ರದ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಸ್ವತಃ ಕಂಗನಾ ರಣಾವತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ವಿಶೇಷ. ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ, ಸತೀಶ್ ಕೌಶಿಕ್ ಮುಂತಾದ ನಟರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 am, Mon, 3 October 22