ಮತ್ತೊಂದು ತೆಲುಗು ಸಿನಿಮಾ ಅವಕಾಶ ಬಾಚಿಕೊಂಡ ಬಾಲಿವುಡ್ ನಟ
Emraan Hashmi: ಬಾಲಿವುಡ್ ನಟ ಇಮ್ರಾನ್ ಹಶ್ಮಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಅವರಿಗೆ ಮತ್ತೊಂದು ತೆಲುಗು ಸಿನಿಮಾ ಆಫರ್ ದೊರಕಿದೆ.
ಬಾಲಿವುಡ್ (Bollywood) ಸ್ಟಾರ್ ನಟರು ದಕ್ಷಿಣ ಭಾರತ ಚಿತ್ರರಂಗಕ್ಕೆ ದಾಂಗುಡಿ ಇಟ್ಟಿದ್ದಾರೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ಮಿಂಚಿ ದೊಡ್ಡ ಹೆಸರು ಗಳಿಸಿದ ಬಳಿಕ ಬಾಲಿವುಡ್ ಸ್ಟಾರ್ ನಟರುಗಳು ದಕ್ಷಿಣದತ್ತ ಮುಖ ಮಾಡಿದ್ದಾರೆ. ಬಾಲಿವುಡ್ನಲ್ಲಿ ಹೀರೋಗಳಾಗಿ ಮಿಂಚಿದವರು ಸಹ ದಕ್ಷಿಣ ಭಾರತ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಿದ್ದಾರೆ. ಸಂಜಯ್ ದತ್ ಬಳಿಕ, ಬಾಲಿವುಡ್ನ ಸ್ಟಾರ್ ನಟ ಸೈಫ್ ಅಲಿ ಖಾನ್ ದಕ್ಷಿಣಕ್ಕೆ ಬಂದರು ಅದಾದ ಬಳಿಕ ಇಮ್ರಾನ್ ಹಶ್ಮಿ ಎಂಟ್ರಿ ನೀಡಿದರು. ಇಮ್ರಾನ್ರ ನಟನೆಯ ಮೊದಲ ತೆಲುಗು ಸಿನಿಮಾದ ಚಿತ್ರೀಕರಣ ಮುಗಿವ ಮುನ್ನವೇ ಹೊಸ ತೆಲುಗು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇಮ್ರಾನ್ ಹಶ್ಮಿ, ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೆಟ್ರೋ ಮಾಫಿಯಾ ಕತೆಯುಳ್ಳ ಈ ಸಿನಿಮಾದಲ್ಲಿ ಎರಡು ಶೇಡ್ಗಳಲ್ಲಿ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದೆ. ಈ ನಡುವೆ ಇಮ್ರಾನ್ ಹಶ್ಮಿಗೆ ತೆಲುಗಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾದ ಆಫರ್ ಬಂದಿದೆ.
ಇದನ್ನೂ ಓದಿ:‘ನಮಗಿಂತ ದಕ್ಷಿಣ ಭಾರತದವರು ಶಿಸ್ತಿನ ಕೆಲಸ ಮಾಡುತ್ತಾರೆ’ ಎಂದ ಇಮ್ರಾನ್ ಹಶ್ಮಿ
‘ಗೂಢಚಾರಿ’ ತೆಲುಗಿನ ಜನಪ್ರಿಯ ಸ್ಪೈ ಥ್ರಿಲ್ಲರ್ ಸಿನಿಮಾ. ಈಗಾಗಲೇ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ‘ಗೂಢಚಾರಿ 2’ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಟ ಆದಿಶೇಷ್ ಎದುರು ಇಮ್ರಾನ್ ಹಶ್ಮಿ ವಿಲನ್ ಆಗಿ ನಟಿಸಲಿದ್ದಾರೆ. ಸಿನಿಮಾದಲ್ಲಿ ಬನಿತಾ ಸಂಧು ನಾಯಕಿಯಾಗಿ ನಟಿಸುತ್ತಿದ್ದು, ವಿನಯ್ ಕುಮಾರ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣವನ್ನು ಅಭಿಷೇಕ್ ಅಗರ್ವಾಲ್ ಮಾಡುತ್ತಿದ್ದಾರೆ. ಆದಿಶೇಷ್, ಅಭಿಷೇಕ್ ಅಗರ್ವಾಲ್ ಹಾಗೂ ಚಿತ್ರತಂಡದ ಇತರೆ ಪ್ರಮುಖರು, ಇಮ್ರಾನ್ ಖಾನ್ರ ಚಿತ್ರ ಹಂಚಿಕೊಂಡು ಸಿನಿಮಾಕ್ಕೆ ಸ್ವಾಗತಿಸಿದ್ದಾರೆ.
ಇಮ್ರಾನ್ ಹಶ್ಮಿ ಈ ಹಿಂದೆ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ಗ್ರೇ ಶೇಡ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪೂರ್ಣ ಪ್ರಮಾಣದ ವಿಲನ್ ಆಗಿ ನಟಿಸಿದ್ದು ‘ಟೈಗರ್ 3’ ಸಿನಿಮಾದಲ್ಲಿ. ಆ ಸಿನಿಮಾದ ಬಳಿಕ ಸಾಲು-ಸಾಲು ವಿಲನ್ ಪಾತ್ರಗಳು ಅವರನ್ನು ಅರಸಿ ಬರುತ್ತಿವೆ. ‘ಟೈಗರ್ 3’ ಸಿನಿಮಾ ಬಿಡುಗಡೆಗೆ ಮುನ್ನವೇ ‘ಓಜಿ’ ಸಿನಿಮಾದಲ್ಲಿ ವಿಲನ್ ಪಾತ್ರದ ಆಫರ್ ಅವರನ್ನು ಅರಸಿ ಬಂದಿತ್ತು, ಇದೀಗ ‘ಗೂಢಚಾರಿ 2’ ಸಿನಿಮಾದ ಆಫರ್ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ