
ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ನಂತರ ಗೋವಾ ಪೊಲೀಸರು ‘ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 194 ರ ಅಡಿಯಲ್ಲಿ ಈ ಕೇಸ್ ದಾಖಲಿಸಿದ್ದಾರೆ. ನಾನಾ ಪಾಟೇಕರ್ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅಕ್ಟೋಬರ್ 8ರಂದು ಗೋವಾದ ತಮ್ಮ ಮನೆಯಲ್ಲಿ ನಾನಾ ಪಾಟೇಕರ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರ ಮನೆಗೆ ವೈದ್ಯಕೀಯ ತಂಡ ಆಗಮಿಸಿ ಸಿಪಿಆರ್ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿತ್ತು. ಆದರೆ ಬೆಳಿಗ್ಗೆ 5:20 ಕ್ಕೆ ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ವೈದ್ಯರು ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ ಅವರ ಜೀವ ಉಳಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ನಿತಿನ್ ನಾಯಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಕಾನೂನು ಮತ್ತು ವೈದ್ಯಕೀಯ ಪ್ರಕ್ರಿಯೆಗಳ ಭಾಗವಾಗಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಮೃತಪಟ್ಟ ದಿನವೇ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ನಾನಾ ಪಾಟೇಕರ್ ಅವರು ಕಾರ್ಯಕ್ರಮವೊಂದಕ್ಕಾಗಿ ಗೋವಾಗೆ ಆಗಮಿಸಿದ್ದರು. ಅಕ್ಟೋಬರ್ 4ರಂದು ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ನಾನಾ ಅವರು ದೋನಾ ಪೌಲಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ಓ ರೋಮಿಯೋ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಜೊತೆಗೆ ‘ಸುಬೇದಾರ್’ ಮತ್ತು ‘ವನವಾಸ್’ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ: ಗಂಗೂಬಾಯಿ ಹಾನಗಲ್ ಕಚೇರಿ ಹಾಳು ಮಾಡಲು ಹೋಗಿ ಅವರ ಸಂಗೀತಕ್ಕೆ ಫಿದಾ ಆಗ್ಬಿಟ್ಟಿದ್ರು ನಾನಾ ಪಾಟೇಕರ್
ಅವರ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಭಾರಿ ಆಘಾತ ತಂದೊಡ್ಡಿದೆ. ಬಹುಮುಖ ಪ್ರತಿಭೆಯ ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.