ಸಾಮಾನ್ಯವಾಗಿ ಯಾವುದೇ ದಂಪತಿ ವಿಚ್ಛೇದನ ಪಡೆದುಕೊಂಡರೂ ಅವರ ನಡುವೆ ಮನಸ್ತಾಪ ಜೋರಾಗಿರುತ್ತದೆ. ಡಿವೋರ್ಸ್ ಬಳಿಕ ಒಬ್ಬರ ಮುಖ ಇನ್ನೊಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಆದರೆ ಕಿರಣ್ ರಾವ್ ಮತ್ತು ಆಮಿರ್ ಖಾನ್ ಅವರು ವಿಚ್ಛೇದನ ಪಡೆದ ನಂತರವೂ ಸ್ನೇಹಿತರಾಗಿ ಮುಂದುವರಿದಿದ್ದಾರೆ. ಅವರಿಬ್ಬರ ನಡುವೆ ಈಗಲೂ ಆಪ್ತವಾದ ಸ್ನೇಹ ಇದೆ. ಈ ರೀತಿ ಫ್ರೆಂಡ್ಸ್ ಆಗಿ ಇರುವುದಾದರೆ ವಿಚ್ಛೇದನ ಪಡೆಯುವ ಅಗತ್ಯ ಏನಿತ್ತು ಎಂಬುದು ಅನೇಕರ ಪ್ರಶ್ನೆ. ಕಿರಣ್ ರಾವ್ ಅವರ ತಂದೆ-ತಾಯಿ ಕೂಡ ಕಿರಣ್ಗೆ ಇದೇ ಪ್ರಶ್ನೆ ಕೇಳಿದ್ದರಂತೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿರಣ್ ರಾವ್ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಆಮಿರ್ ಖಾನ್ ಜೊತೆ ಕಿರಣ್ ರಾವ್ ಅವರು ಸ್ನೇಹ ಮುಂದುವರಿಸಿದ್ದಾರೆ. ಆಮಿರ್ ಖಾನ್ರ ಮೊದಲ ಪತ್ನಿಯ ಮಗಳಾದ ಇರಾ ಖಾನ್ ಮದುವೆಯಲ್ಲಿ ಕಿರಣ್ ರಾವ್ ಭಾಗಿ ಆಗಿದ್ದರು. ಅಷ್ಟೇ ಅಲ್ಲದೇ, ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾಗೆ ಆಮಿರ್ ಖಾನ್ ಬಂಡವಾಳ ಹೂಡಿದರು. ಈ ಮಾಜಿ ದಂಪತಿಗೆ ಆಜಾದ್ ಎಂಬ ಮಗನಿದ್ದು, ಆತನ ಪಾಲನೆಯ ಜವಾಬ್ದಾರಿಯನ್ನು ಇಬ್ಬರೂ ನಿಭಾಯಿಸುತ್ತಿದ್ದಾರೆ. ಈ ಆಪ್ತತೆ ಬಗ್ಗೆ ಕಿರಣ್ ರಾವ್ ಮಾತನಾಡಿದ್ದಾರೆ.
‘ನನ್ನ ಪಾಲಕರು ಕೂಡ ಇದೇ ಪ್ರಶ್ನೆ ಕೇಳುತ್ತಾರೆ. ಆದರೆ ನಾನು ಸ್ವತಂತ್ರವಾಗಿ ಇರಬೇಕು. ಆಜಾದ್ನ ಪಾಲಕರಾಗಿ, ಕುಟುಂಬದವರಾಗಿ ಆಮಿರ್ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ. ಇದರಿಂದ ವಿಚ್ಛೇದನವನ್ನು ಸಹಿಸಲು ಸಾಧ್ಯವಾಯ್ತು. ಆಜಾದ್ನ ತಂದೆ ನನ್ನ ಆಪ್ತ ಸ್ನೇಹಿತ ಎಂಬ ಭರವಸೆಯಲ್ಲಿ ನಾನು ನನ್ನ ವೈಯಕ್ತಿಕ ಸಮಯವನ್ನು ಕಳೆಯಬಹುದು. ನನಗೆ ಮತ್ತು ಆಮಿರ್ ಖಾನ್ ಅವರಿಗೆ ಭಾವನಾತ್ಮಕವಾಗಿ, ಮಾನಸಿಕವಾಗಿ ಈ ಸ್ಥಿತಿಗೆ ಬರಲು ಸ್ವಲ್ಪ ಸಮಯ ಹಿಡಿಯಿತು. ನಾವು ಬೇರೆ ಎಲ್ಲಿಗೋ ಹೋಗುವುದಿಲ್ಲ. ಎಂದೆಂದಿಗೂ ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತೇನೆ. ಅದಕ್ಕೆ ದಂಪತಿಯೇ ಆಗಿರಬೇಕಿಲ್ಲ’ ಎಂದು ಕಿರಣ್ ರಾವ್ ಹೇಳಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
‘ಒಂಟಿಯಾಗಿ ಇರುವುದು ನನಗೆ ಖುಷಿ ನೀಡುತ್ತದೆ. ಆಮಿರ್ ಜೊತೆ ಮದುವೆಗೂ ಮುನ್ನ ನಾನು ಒಂಟಿಯಾಗಿದ್ದೆ. ನನ್ನ ಸ್ವತಂತ್ರವನ್ನು ನಾನು ಎಂಜಾಯ್ ಮಾಡಿದೆ. ಈಗ ನಾನು ಒಂಟಿಯಾದರೂ ಕೂಡ ಮಗ ಇದ್ದಾನೆ. ವಿಚ್ಛೇದನ ಬಯಸಿದ ಅನೇಕ ಮಹಿಳೆಯರು ಒಂಟಿಯಾಗಿರಲು ಹೆದರುತ್ತಾರೆ. ಅದೃಷ್ಟವಶಾತ್ ನನಗೆ ಅದು ಎದುರಾಗಿಲ್ಲ. ಎರಡೂ ಕುಟುಂಬದವರಿಂದ ನನಗೆ ಬೆಂಬಲ ಸಿಕ್ಕಿತು. ನಮ್ಮದು ಖುಷಿ ಖುಷಿಯ ಡಿವೋರ್ಸ್’ ಎಂದಿದ್ದಾರೆ ಕಿರಣ್ ರಾವ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.