ಜಾಕ್ವೆಲಿನ್ ಫರ್ನಾಂಡಿಸ್ಗೆ ದುಬೈಗೆ ತೆರಳಲು ಅವಕಾಶ ನೀಡಿದ ಕೋರ್ಟ್; ಷರತ್ತುಗಳು ಅನ್ವಯ
IIFA ಕಾರ್ಯಕ್ರಮ ದುಬೈನಲ್ಲಿ ನಡೆಯುತ್ತಿದೆ. ಈ ಅವಾರ್ಡ್ ಫಂಕ್ಷನ್ಗೆ ಜಾಕ್ವೆಲಿನ್ ಅವರಿಗೂ ಆಮಂತ್ರಣ ಇದೆ. ಅವರು ತನಿಖೆ ಎದುರಿಸುತ್ತಿರುವುದರಿಂದ ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ. ಹೀಗಾಗಿ, ದೆಹಲಿ ಕೋರ್ಟ್ಗೆ ಜಾಕ್ವೆಲಿನ್ ವಿಶೇಷ ಮನವಿ ಸಲ್ಲಿಕೆ ಮಾಡಿದ್ದರು.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು (Jacqueline Fernandez) ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ಅವರ ವೈಯಕ್ತಿಕ ಜೀವನದ ವಿಚಾರ ಹೆಚ್ಚು ಚರ್ಚೆಯಲ್ಲಿದೆ. ಉದ್ಯಮಿಗಳಿಗೆ ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜತೆ ಜಾಕ್ವೆಲಿನ್ ಸಂಪರ್ಕದಲ್ಲಿ ಇದ್ದರು. ಜತೆಗೆ ಅವರಿಂದ ಉಡುಗೊರೆ ಪಡೆದಿದ್ದರು. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಅವರಿಗೆ ಸಂಬಂಧಿಸಿದ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರು ದೆಹಲಿ ಕೋರ್ಟ್ ಮೆಟ್ಟಿಲೇರಿದ್ದರು. ವಿದೇಶಕ್ಕೆ ತೆರಳಲು ಅವಕಾಶ ಕೋರಿ ಅವರು ಮನವಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾದರೆ ಅವರ ಪಾಸ್ಪೋರ್ಟ್ಅನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಒಂದೊಮ್ಮೆ ಅವರು ವಿದೇಶಕ್ಕೆ ತೆರಳಿದರೆ ಮತ್ತೆ ಅವರು ಹಿಂದಿರುಗದೆ ಇರಬಹುದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ. ಅದೇ ರೀತಿ ಜಾಕ್ವೆಲಿನ್ಗೆ ವಿದೇಶಕ್ಕೆ ತೆರಳುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಈ ಮೊದಲು ವಿದೇಶಕ್ಕೆ ಹೊರಟಿದ್ದ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಹೀಗಾಗಿ ಜಾಕ್ವೆಲಿನ್ ಅವರು ದೆಹಲಿ ಕೋರ್ಟ್ ಮೊರೆ ಹೋಗಿದ್ದರು.
ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ದುಬೈನಲ್ಲಿ ನಡೆಯುತ್ತಿದೆ. ಈ ಅವಾರ್ಡ್ ಫಂಕ್ಷನ್ಗೆ ಜಾಕ್ವೆಲಿನ್ ಅವರಿಗೂ ಆಮಂತ್ರಣ ಇದೆ. ಅವರು ತನಿಖೆ ಎದುರಿಸುತ್ತಿರುವುದರಿಂದ ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ. ಹೀಗಾಗಿ, ದೆಹಲಿ ಕೋರ್ಟ್ಗೆ ಜಾಕ್ವೆಲಿನ್ ವಿಶೇಷ ಮನವಿ ಸಲ್ಲಿಕೆ ಮಾಡಿದ್ದರು. ಅವಾರ್ಡ್ ಫಂಕ್ಷನ್ ನಿಮಿತ್ತ 15 ದಿನ ದುಬೈಗೆ ತೆರಳಲು ಅವಕಾಶ ಕೇಳಿದ್ದರು. ಕೆಲ ಷರತ್ತುಗಳನ್ನು ವಿಧಿಸಿ ಕೋರ್ಟ್ ಇದಕ್ಕೆ ಅನುಮತಿ ನೀಡಿದೆ.
ಇದನ್ನೂ ಓದಿ: ವಂಚನೆ ಆರೋಪಿ ಜತೆಗಿನ ಖಾಸಗಿ ಫೋಟೋ ವೈರಲ್ ಆದ ಬಳಿಕ ಅಧ್ಯಾತ್ಮದ ಮೊರೆಹೋದ ಜಾಕ್ವೆಲಿನ್ ಫರ್ನಾಂಡಿಸ್
‘ಮೇ 31ರಿಂದ ಜೂನ್ 6ವರೆಗೆ ಮಾತ್ರ ಅವರು ದುಬೈ ಪ್ರಯಾಣ ಬೆಳೆಸಬಹುದು. ದುಬೈನಲ್ಲಿ ಎಲ್ಲಿ ಉಳಿದುಕೊಳ್ಳುತ್ತಾರೆ, ಅಲ್ಲಿ ಬಳಕೆ ಮಾಡುವ ಮೊಬೈಲ್ ಸಂಖ್ಯೆ ಯಾವುದು ಎನ್ನುವ ಬಗ್ಗೆ ಮಾಹಿತಿ ನೀಡಬೇಕು. 50 ಲಕ್ಷ ರೂಪಾಯಿ ಬಾಂಡ್ನ ಶ್ಯೂರಿಟಿ ನೀಡಬೇಕು’ ಎಂದು ಕೋರ್ಟ್ ಹೇಳಿದೆ. ಈ ಷರತ್ತುಗಳಿಗೆ ಜಾಕ್ವೆಲಿನ್ ಪರ ವಕೀಲರು ಸಮ್ಮತಿ ಸೂಚಿಸಿದ್ದಾರೆ. ಜೂನ್ 2ರಿಂದ ಜೂನ್ 4ವರೆಗೆ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ.
ಸುಕೇಶ್ ಕಡೆಯಿಂದ ಜಾಕ್ವೆಲಿನ್ಗೆ ಸಾಕಷ್ಟು ದುಬಾರಿ ಉಡುಗೊರೆಗಳು ಸಿಕ್ಕಿದ್ದವು. ಇದನ್ನು ಇತ್ತೀಚೆಗೆ ಇಡಿ ವಶಕ್ಕೆ ಪಡೆದಿದೆ. ಜಾಕ್ವೆಲಿನ್ ಓಡಾಟಕ್ಕೆ ಸುಕೇಶ್ ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಿದ್ದ ಎಂಬುದಾಗಿ ವರದಿ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.