ವಂಚನೆ ಆರೋಪಿ ಜತೆಗಿನ ಖಾಸಗಿ ಫೋಟೋ ವೈರಲ್ ಆದ ಬಳಿಕ ಅಧ್ಯಾತ್ಮದ ಮೊರೆಹೋದ ಜಾಕ್ವೆಲಿನ್ ಫರ್ನಾಂಡಿಸ್
Jacqueline Fernandez: ತಮ್ಮ ಮೇಲೆ ಕೇಳಿಬಂದಿರುವ ಹಲವು ಆರೋಪಗಳ ಕಾರಣದಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ. ಹಾಗಾಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಈಗ ಕಷ್ಟದ ಕಾಲ. 200 ಕೋಟಿ ರೂ. ವಂಚನೆ ಆರೋಪವನ್ನು ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrashekar) ಜತೆ ಒಡನಾಟ ಹೊಂದಿದ್ದ ಕಾರಣಕ್ಕೆ ಜಾಕ್ವೆಲಿನ್ ಕೂಡ ವಿಚಾರಣೆಗೆ ಒಳಪಡುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಡುವಿನ ಖಾಸಗಿ ಫೋಟೋಗಳು ವೈರಲ್ (Jacqueline Fernandez Viral Photo) ಆಗಿದ್ದು ಅವರ ವರ್ಚಸ್ಸಿಗೆ ಪೆಟ್ಟು ನೀಡಿತು. ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದಲ್ಲಿ ನಟಿಸಿರುವ ಈ ಬಾಲಿವುಡ್ ನಟಿ ಈಗ ಮನಸ್ಸಿಗೆ ನೆಮ್ಮದಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅದಕ್ಕಾಗಿ ಅವರು ಅಧ್ಯಾತ್ಮದ ಹಾದಿ ಹಿಡಿದ್ದಾರೆ ಎನ್ನುತ್ತಿವೆ ಮೂಲಗಳು.
ಜಾಕ್ವೆಲಿನ್ ಅವರು ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಸಲ್ಮಾನ್ ಖಾನ್ ಬಳಗದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಮೂಲದ ಈ ಚೆಲುವೆಗೆ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಹವಾಸವೇ ಮುಳುವಾಗಿದೆ. ಒಟ್ಟಾರೆ ಪ್ರಕರಣದಿಂದ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ. ಹಾಗಾಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ವೈರಲ್ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಅವರು ಪ್ರಕಟಣೆ ಒಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಅಲ್ಲದೆ, ವಿಶೇಷ ಮನವಿ ಮಾಡಿಕೊಂಡಿದ್ದರು. ‘ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೂ ಇದು ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಮಾಡುವುದಿಲ್ಲ, ಅದೇ ರೀತಿ ನನಗೂ ಈ ರೀತಿ ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆಯು ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಧನ್ಯವಾದಗಳು’ ಎಂದು ಜಾಕ್ವೆಲಿನ್ ಬರೆದುಕೊಂಡಿದ್ದರು.
ಇದನ್ನೂ ಓದಿ:
‘ಜಾಕ್ವೆಲಿನ್ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್ ಚಂದ್ರಶೇಖರ್ ಹೊಸ ಪುರಾಣ
‘ವಿಕ್ರಾಂತ್ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್ ಫರ್ನಾಂಡಿಸ್