
ಜಾನ್ಹವಿ ಕಪೂರ್ ಬಾಲಿವುಡ್ನ ಜನಪ್ರಿಯ ಯುವನಟಿ. ತಮ್ಮ ನಟನೆಗಿಂತಲೂ ಹೆಚ್ಚು ಗ್ಲಾಮರ್ ಇಂದಾಗಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಾರೆ. ಜಾನ್ಹವಿ ಕಪೂರ್ ಕೆಲ ದಕ್ಷಿಣ ಭಾರತ ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಆದ ವಿವಾದದಿಂದಾಗಿ ಜಾನ್ಹವಿಯ ಬಗ್ಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಋಣಾತ್ಮಕ ಅಭಿಪ್ರಾಯಗಳು ಹಬ್ಬಿವೆ. ಜಾನ್ಹವಿ, ಕಾಫಿ ವಿತ್ ಕರಣ್ ಶೋನಲ್ಲಿ ಹಾಗೂ ಬೇರೊಂದು ಶೋನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ತುಸು ಋಣಾತ್ಮಕವಾಗಿ ಮಾತನಾಡಿದ್ದರು. ‘ಪೆದ್ದಿ’ ಸಿನಿಮಾನಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂಬರ್ಥದ ಮಾತುಗಳನ್ನಾಡಿದ್ದರು. ಇದಕ್ಕೆ ದಕ್ಷಿಣದ ಕೆಲವು ಸೆಲಬ್ರಿಟಿಗಳು ಮತ್ತು ಪ್ರೇಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಜಾನ್ಹವಿ ಅವರು ಅದರ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಸಹ ‘ಕಾಫಿ ವಿತ್ ಕರಣ್’ನಲ್ಲಿ ಮಾತನಾಡಿದ್ದ ಜಾನ್ಹವಿ, ‘ದಕ್ಷಿಣ ಭಾರತ ಚಿತ್ರರಂಗದಲ್ಲಿ ಚಿತ್ರಕತೆ ನೀಡುವುದಿಲ್ಲ. ಅಲ್ಲಿ ಪ್ರಶ್ನೆ ಮಾಡಲು ಅವಕಾಶ ಇರುವುದಿಲ್ಲ. ‘ಪೆದ್ದಿ’ ಸಿನಿಮಾ ಸಮಯದಲ್ಲಿ ನಾನು ಪ್ರತಿಭಟಿಸಬೇಕಿತ್ತು’ ಎಂದೆಲ್ಲ ಹೇಳಿದ್ದರು. ಅದಕ್ಕೆ ಮುಂಚೆಯೂ ಸಹ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕಿಯರ ಗ್ಲಾಮರ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬರ್ಥದ ಮಾತುಗಳನ್ನಾಡಿದ್ದರು. ಇದರ ಬಗ್ಗೆ ನಟಿ ರೆಜಿನಾ ಕಸಾಂಡ್ರಾ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ‘ಇಷ್ಟವಾಗದಿದ್ದರೆ ನಟಿಯರು ಸಿನಿಮಾನಲ್ಲಿ ನಟಿಸಬಾರದು. ಸಿನಿಮಾಗಳಲ್ಲಿ ನಟಿಸುವುದು, ನಟಿಸದೇ ಇರುವುದು ನಟಿಯರ ಆಯ್ಕೆ, ಸಂಭಾವನೆ ಪಡೆದು ನಟಿಸಿದ ಬಳಿಕ ಹೀಗೆ ದೂರುಗಳನ್ನು ಹೇಳುವುದು ತಪ್ಪು’ ಎಂದು ಅವರು ದೂರಿದ್ದರು.
ಇದೆಲ್ಲ ವಿವಾದದ ಬಳಿಕ ಜಾನ್ಹವಿ ಬಗ್ಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಋಣಾತ್ಮಕ ಅಭಿಪ್ರಾಯಗಳು ಹಬ್ಬಿದ್ದು, ಇದೀಗ ಜಾನ್ಹವಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಇತ್ತೀಚೆಗೆ ತಮಿಳು ಸಂದರ್ಶನವೊಂದರಲ್ಲಿ ಭಾಗಿ ಆಗಿರುವ ಜಾನ್ಹವಿ ಕಪೂರ್ ದಕ್ಷಿಣ ಭಾರತದ ಸಿನಿಮಾಗಳನ್ನು ಕೊಂಡಾಡಿದ್ದಾರೆ. ತಾವು ನೋಡಿದ, ತಮಗೆ ಇಷ್ಟವಾದ ಸಿನಿಮಾಗಳ ಪಟ್ಟಿ ನೀಡಿದ್ದಾರೆ.
ಇದನ್ನೂ ಓದಿ:ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಜಾನ್ಹವಿಯ ಹತ್ತಿರದ ಸಂಬಂಧಿಯೇ ಆಗಿರುವ ಮಹೇಶ್ವರಿ ಅವರ ತಮಿಳು ಪಾಡ್ಕಾಸ್ಟ್ನಲ್ಲಿ ಭಾಗಿ ಆಗಿದ್ದ ಜಾನ್ಹವಿ, ತಾವು ಇತ್ತೀಚೆಗೆ ತಮಿಳಿನ ‘ಬ್ಲಾಸ್ಟ್’ ಸಿನಿಮಾ ನೋಡಿದ್ದಾಗಿ ಹೇಳಿದರು. ಅದರ ಹೆಸರು ಅವರಿಗೆ ನೆನಪಿಗೆ ಇರಲಿಲ್ಲ. ಅದಾದ ಬಳಿಕ ತಮ್ಮ ತಂದೆ ರೀಮೇಕ್ ಮಾಡಿದ ಹಲವು ದಕ್ಷಿಣ ಭಾರತ ಸಿನಿಮಾಗಳನ್ನು ನೋಡಿರುವುದಾಗಿ ಅವರು ಹೇಳಿದರು. ‘ಬೊಮ್ಮರಿಲ್ಲು’, ವಿಜಯ್ ನಟನೆಯ ‘ಪೋಕಿರಿ’, ಕಮಲ್ ಹಾಸನ್ ಮತ್ತು ಶ್ರೀದೇವಿ ನಟನೆಯ ‘ಮೂಂದ್ರು ಪಿರಯ್’ ಇನ್ನೂ ಹಲವು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ್ದಾರೆ. ಜೊತೆಗೆ ತಮಗೆ ವಿಜಯ್ ಸೇತುಪತಿ ಬಹಳ ಇಷ್ಟ, ಅವರಿಗೆ ವಾಯ್ಸ್ ನೋಟ್ ಸಹ ಕಳಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಆದರೆ ಈ ಸಂದರ್ಶನ ನೋಡಿದ ಹಲವರು ಜಾನ್ಹವಿ ಕಪೂರ್ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ನೀಡಿರುವ ಹೇಳಿಕೆಗಳಿಂದ ದಕ್ಷಿಣದಲ್ಲಿ ಅವರ ಬಗ್ಗೆ ತುಸು ನೆಗೆಟಿವ್ ಪ್ರಚಾರ ಆಗಿದ್ದು ಅದನ್ನು ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 am, Sun, 8 November 26