ನರಕಕ್ಕೆ ಬೇಕಾದರೆ ಹೋಗುತ್ತೇನೆ, ಪಾಕಿಸ್ತಾನಕ್ಕೆ ಹೋಗಲಾರೆ: ಜಾವೇದ್ ಅಖ್ತರ್
ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದಲ್ಲೂ ಜಾವೇದ್ ಅಖ್ತರ್ ಅವರನ್ನು ಟೀಕಿಸುವ ಜನರು ಇದ್ದಾರೆ. ಆ ಬಗ್ಗೆ ಜಾವೇದ್ ಅಖ್ತರ್ ಅವರು ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಕಿಸ್ತಾನ ಮತ್ತು ನರಕದ ಉದಾಹರಣೆಯನ್ನು ನೀಡಿ ಅವರು ತಮ್ಮ ಅನಿಸಿಕೆ ತಿಳಿಸಿದರು. ಆ ಕುರಿತು ಇಲ್ಲಿದೆ ಮಾಹಿತಿ..

ಸಾಹಿತಿ, ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ಅವರು ನೇರ ನಡೆ-ನುಡಿಯಿಂದ ಫೇಮಸ್ ಆಗಿದ್ದಾರೆ. ರಾಷ್ಟ್ರ, ದೇವರ, ಧರ್ಮ ಇತ್ಯಾದಿ ಬಗ್ಗೆ ಅವರು ನೇರವಾಗಿ ಮಾತನಾಡುತ್ತಾರೆ. ಆದ್ದರಿಂದ ಅವರು ಕೆಲವರಿಂದ ವಿರೋಧ ಎದುರಿಸಿದ್ದು ಉಂಟು. ಮುಂಬೈನಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಹಿಂದೂ ಮತ್ತು ಇಸ್ಲಾಂ (Muslim) ಧರ್ಮದಲ್ಲಿ ಇರುವ ಮೂಲಭೂತವಾದಿಗಳು ತಮ್ಮನ್ನು ವಿರೋಧಿಸುತ್ತಾರೆ ಎಂದು ಜಾವೇದ್ ಅಖ್ತರ್ ಅವರು ಹೇಳಿದ್ದಾರೆ. ಈ ವೇಳೆ ಅವರು ಪಾಕಿಸ್ತಾನ (Pakistan) ಮತ್ತು ನರಕದ ಹೋಲಿಕೆ ಮಾಡಿದ್ದಾರೆ.
‘ಎರಡೂ ಧರ್ಮದ ಜನರು ನನ್ನನ್ನು ನಿಂದಿಸುತ್ತಾರೆ. ಕೇವಲ ಒಂದು ಕಡೆಯವರು ಅಲ್ಲ. ಆದರೆ ನನ್ನನ್ನು ಹೊಗಳುವವರು ಕೂಡ ಇದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಹಲವರು ನನ್ನನ್ನು ಬೆಂಬಲಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ಎರಡೂ ಧರ್ಮದಲ್ಲಿ ಅತಿರೇಖವಾಗಿ ವರ್ತಿಸುವ ಜನರು ನನ್ನನ್ನು ನಿಂದಿಸುತ್ತಾರೆ ಎಂಬುದು ಕೂಡ ನಿಜ. ಅದೇ ವಾಸ್ತವ’ ಎಂದು ಜಾವೇದ್ ಅಖ್ತರ್ ಅವರು ಹೇಳಿದ್ದಾರೆ.
‘ಒಂದು ಸಮುದಾಯದವರು ನನ್ನನ್ನು ಕಾಫೀರ್ ಎನ್ನುತ್ತಾರೆ, ನರಕಕ್ಕೆ ಹೋಗು ಎನ್ನುತ್ತಾರೆ. ಇನ್ನೊಂದು ಸಮುದಾಯದವರು ನನ್ನನ್ನು ಜಿಹಾದಿ ಎನ್ನುತ್ತಾರೆ, ಪಾಕಿಸ್ತಾನಕ್ಕೆ ಹೋಗು ಎನ್ನುತ್ತಾರೆ. ನನಗೆ ಇರುವ ಆಯ್ಕೆ ಪಾಕಿಸ್ತಾನ ಮತ್ತು ನರಕ ಮಾತ್ರ ಎಂಬುದಾದರೆ ನಾನು ಪಾಕಿಸ್ತಾನದ ಬದಲು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಜಾವೇದ್ ಅಖ್ತರ್.
ಪಹಲ್ಗಾಮ್ನಲ್ಲಿ ಪಾಕ್ ಉಗ್ರರು ದಾಳಿ ಮಾಡಿ ಅಮಾಯಕರ ಪ್ರಾಣ ಬಲಿ ತೆಗೆದುಕೊಂಡಾಗಿನಿಂದ ಇಂಡಿಯಾ ಮತ್ತು ಪಾಕ್ ನಡುವೆ ಸಂಘರ್ಷ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಜಾವೇದ್ ಅಖ್ತರ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಪಾಕ್ ಉಗ್ರರ ಕೃತ್ಯವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: ಪಾಕಿಸ್ತಾನದ ಕಿವಿಯಲ್ಲಿ ಭಾರತದ ಗುಟ್ಟು ಪಿಸುಗುಟ್ಟುತ್ತಿದ್ದ 8 ಮಂದಿ ಬಂಧನ
‘ಇದು ಒಮ್ಮೆ ಮಾತ್ರವಲ್ಲ, ಹಲವು ಬಾರಿ ಹೀಗೆಯೇ ಆಗಿದೆ. ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಗಡಿ ಭಾಗದಲ್ಲಿ ಕೆಲವು ಗುಂಡು ಹಾರಿಸಿದರೆ ಏನೂ ಆಗಲ್ಲ. ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಾವೇದ್ ಅಖ್ತರ್ ಅವರು ಹೇಳಿದ್ದರು. ಕೆಲವು ಬಾಲಿವುಡ್ ಹೀರೋಗಳು ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಿರಲಿಲ್ಲ. ಅಂಥವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








