‘ವಾರ್ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್ ಎನ್ಟಿಆರ್; 10 ದಿನ ಶೂಟಿಂಗ್
ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂನಿಯರ್ ಎನ್ಟಿಆರ್ ಅವರ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಕಾಣಿಸಿಕೊಂಡ ರೀತಿಯೇ ‘ವಾರ್ 2’ ಚಿತ್ರದಲ್ಲಿ ಅವರ ಗೆಟಪ್ ಇರಲಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಹೃತಿಕ್ ರೋಷನ್ ಜೊತೆ 10 ದಿನಗಳ ಕಾಲ ಸಾಹಸ ಸನ್ನಿವೇಶದ ಶೂಟಿಂಗ್ನಲ್ಲಿ ಜೂನಿಯರ್ ಎನ್ಟಿಆರ್ ಭಾಗಿಯಾಗಲಿದ್ದಾರೆ.

ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಬಾಲಿವುಡ್ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಈಗಾಗಲೇ ತಿಳಿದಿರುವಂತೆ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ (War 2) ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಲಿದ್ದಾರೆ. ಆ ಸಿನಿಮಾದ ಶೂಟಿಂಗ್ ಸಲುವಾಗಿ ಅವರೀಗ ಮುಂಬೈಗೆ ತೆರಳಿದ್ದಾರೆ. ಮುಂಬೈಗೆ ಕಾಲಿಡುತ್ತಿದ್ದಂತೆಯೇ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ (Hrithik Roshan) ಜೊತೆ ಜೂನಿಯರ್ ಎನ್ಟಿಆರ್ ತೆರೆಹಂಚಿಕೊಳ್ಳಲಿದ್ದಾರೆ.
ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಅವರ ಕಾಂಬಿನೇಷನ್ ಎಂಬ ಕಾರಣಕ್ಕೆ ‘ವಾರ್ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಅಯಾನ್ ಮುಖರ್ಜಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೂನಿಯರ್ ಎನ್ಟಿಆರ್ ಅವರು ಮುಂಬೈಗೆ ಹೋಗಿದ್ದಾರೆ. ಆರಂಭದಲ್ಲೇ ಅವರು ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ಮಾಡಲಿದ್ದಾರೆ ಎನ್ನಲಾಗಿದೆ.
‘ವಾರ್ 2’ ಕಥೆಯಲ್ಲಿ ಬರುವ ಒಂದು ಪ್ರಮುಖವಾದ ಸಾಹಸ ಸನ್ನಿವೇಶಕ್ಕಾಗಿ ಹೃತಿಕ್ ರೋಷನ್ ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರಿಗೆ ಈಗ ಜೂನಿಯರ್ ಎನ್ಟಿಆರ್ ಸಾಥ್ ನೀಡಲಿದ್ದಾರೆ. ಮುಂದಿನ 10 ದಿನಗಳ ಕಾಲ ಫೈಟಿಂಗ್ ದೃಶ್ಯಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯಲಿದೆ. ಈ ಸಿನಿಮಾಗೆ ‘ಯಶ್ ರಾಜ್ ಫಿಲ್ಮ್ಸ್’ ಬಂಡವಾಳ ಹೂಡುತ್ತಿದೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.
‘ಯಶ್ ರಾಜ್ ಸ್ಪೈ ಯೂನಿವರ್ಸ್’ ಭಾಗವಾಗಿ ‘ವಾರ್ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ವರ್ಷ ಆಗಸ್ಟ್ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಕಿಯಾರಾ ಅಡ್ವಾಣಿ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂಬೈ ಏರ್ಪೋರ್ಟ್ನಲ್ಲಿ ಜೂನಿಯರ್ ಎನ್ಟಿಆರ್ ಅವರ ಫೋಟೋಗಳನ್ನು ಪಾಪರಾಜಿಗಳು ಕ್ಲಿಕ್ ಮಾಡಿದ್ದಾರೆ. ಈ ಫೋಟೋದಲ್ಲಿ ಕಾಣಿಸಿಕೊಂಡ ರೀತಿಯೇ ‘ವಾರ್ 2’ ಸಿನಿಮಾದಲ್ಲಿ ಅವರ ಲುಕ್ ಇರಲಿದೆ ಎಂದು ಕೆಲವರು ಊಹಿಸಿದ್ದಾರೆ.
ಇದನ್ನೂ ಓದಿ: ಜೂ. ಎನ್ಟಿಆರ್ ಜತೆ ಕೈ ಜೋಡಿಸಿದ ಕರಣ್ ಜೋಹರ್; ‘ದೇವರ’ ದೊಡ್ಡ ಪ್ಲ್ಯಾನ್
ಇತ್ತ, ಟಾಲಿವುಡ್ನಲ್ಲಿ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. 2 ಪಾರ್ಟ್ನಲ್ಲಿ ಆ ಚಿತ್ರ ಮೂಡಿಬರುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.