ಬಾಕ್ಸ್ ಆಫೀಸ್‌ನಲ್ಲಿ ‘ಏಕ್ ದಿನ್’ ಸಿನಿಮಾಗೆ ಸೋಲು; 2ನೇ ದಿನ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ

ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದೆ. ನೆಗೆಟಿವ್ ವಿಮರ್ಶೆ ಮತ್ತು ಬೇರೆ ಸಿನಿಮಾಗಳ ತೀವ್ರ ಪೈಪೋಟಿಯ ನಡುವೆ ಈ ಚಿತ್ರಕ್ಕೆ ಹೀನಾಯ ಕಲೆಕ್ಷನ್ ಆಗಿದೆ. ಮುಂದಿನ ದಿನಗಳಲ್ಲಿ ಕೂಡ ಚೇತರಿಕೆ ಕಷ್ಟವಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಏಕ್ ದಿನ್’ ಸಿನಿಮಾಗೆ ಸೋಲು; 2ನೇ ದಿನ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ
Sai Pallavi, Junaid Khan

Updated on: May 03, 2026 | 10:14 AM

ಆಮಿರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ಮತ್ತು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಏಕ್ ದಿನ್’ (Ek Din) ಸಿನಿಮಾ ಕಳೆದ ಶುಕ್ರವಾರವಷ್ಟೇ ತೆರೆಕಂಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ. ಮೊದಲ ದಿನವೇ ನೆಗೆಟಿವ್ ವಿಮರ್ಶೆ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನವೂ (ಶನಿವಾರ, ಮೇ 2) ಚೇತರಿಕೆ ಕಾಣದೆ ಗಳಿಕೆಯಲ್ಲಿ ಕುಸಿತ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚಿತ್ರತಂಡಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ‘ಏಕ್ ದಿನ್’ ಸಿನಿಮಾ ಎರಡನೇ ದಿನ ಕೇವಲ 1 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ 1.15 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರಕ್ಕೆ ಶನಿವಾರ ರಜಾ ದಿನವಾಗಿದ್ದರೂ ಯಾವುದೇ ಲಾಭವಾಗಿಲ್ಲ. ಬೇರೆ ಸಿನಿಮಾಗಳ ಪ್ರಬಲ ಪೈಪೋಟಿ ಇರುವುದರಿಂದ ‘ಏಕ್ ದಿನ್’ ಚಿತ್ರದ ಬಾಕ್ಸ್ ಆಫೀಸ್ ಮೇಲೆ ತೀವ್ರ ಪೆಟ್ಟು ಬಿದ್ದಿದೆ.

ರಿತೇಶ್ ದೇಶ್‌ಮುಖ್ ನಟನೆಯ ‘ರಾಜಾ ಶಿವಾಜಿ’ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರ ಕಾಮಿಡಿ-ಹಾರರ್ ಚಿತ್ರ ‘ಭೂತ್ ಬಂಗ್ಲ’ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಆಗುತ್ತಿದೆ. ಹಾಗಾಗಿ ‘ಏಕ್ ದಿನ್’ ಕಲೆಕ್ಷನ್ ಮಂಕಾಗಿದೆ.

ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್

‘ಏಕ್ ದಿನ್’ ಸಿನಿಮಾಗೆ ಸುನಿಲ್ ಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಮನ್ಸೂರ್ ಖಾನ್, ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು 2016ರ ಥಾಯ್ ಸಿನಿಮಾ ‘ಒನ್ ಡೇ’ ರಿಮೇಕ್. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಕೇವಲ ಒಂದು ದಿನದ ಮಟ್ಟಿಗೆ ಆಕೆಯ ಪ್ರೇಮಿಯಾಗಲು ಬಯಸುವ ಕಥಾಹಂದರ ಈ ಚಿತ್ರದಲ್ಲಿದೆ.

‘ಮಹಾರಾಜ್’ ಮತ್ತು ‘ಲವ್ಯಾಪ’ ನಂತರ ಇದು ಜುನೈದ್ ಖಾನ್‌ ನಟನೆಯ ಮೂರನೇ ಸಿನಿಮಾ. ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ಬಾಲಿವುಡ್‌ನಲ್ಲಿ ಇದು ಮೊದಲ ಚಿತ್ರ. ಸಾಯಿ ಪಲ್ಲವಿ ಅವರು ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿತ್ತಾದರೂ, ಕಳಪೆ ಕಲೆಕ್ಷನ್ ಆಗಿರುವುದು ನಿರಾಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us