ಆಮಿರ್ ಖಾನ್ ಮಗನ ಮೊದಲ ಸಿನಿಮಾಗೆ ವಿಘ್ನ; ತಕರಾರು ತೆಗೆದ ವಿಎಚ್ಪಿ
ಚಿತ್ರರಂಗದಲ್ಲಿ ಆಮಿರ್ ಖಾನ್ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಮಗ ಜುನೈದ್ ಖಾನ್ಗೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ. ಅವರ ಮೊದಲ ಸಿನಿಮಾ ‘ಮಹಾರಾಜ್’ ವಿವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಆ ಬಗ್ಗೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಬಿಡುಗಡೆಗೂ ಮೊದಲು ತಮಗೆ ಮೊದಲು ಸಿನಿಮಾ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ನಟ ಆಮಿರ್ ಖಾನ್ (Aamir Khan) ಅವರ ಮಗ ಜುನೈದ್ ಖಾನ್ (Junaid Khan) ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಮಹಾರಾಜ್’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಜೂನ್ 14ರಂದು ರಿಲೀಸ್ ಆಗಲಿದೆ. ಆದರೆ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಒಂದು ವಿಘ್ನ ಎದುರಾಗಿದೆ. ವಿಶ್ವ ಹಿಂದೂ ಪರಿಷತ್ ಸದಸ್ಯರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೂ ಮೊದಲು ತಮಗೆ ‘ಮಹಾರಾಜ್’ (Maharaj) ಸಿನಿಮಾವನ್ನು ತೋರಿಸಬೇಕು ಎಂದು ವಿಎಚ್ಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಗೌತಮ್ ಅವರು ನೆಟ್ಫ್ಲಿಕ್ಸ್ಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಹಿಂದೂ ಧರ್ಮದ ಮುಖಂಡರಿಗೆ ಈ ಸಿನಿಮಾದಲ್ಲಿ ಅವಮಾನ ಆಗಿರುವ ಸೂಚನೆ ಕಾಣಿಸುತ್ತಿದೆ ಎಂದು ಪೋಸ್ಟರ್ ನೋಡಿದರೆ ಅನಿಸುತ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಬಹುದು ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಬಿಡುಗಡೆಗೂ ಮುನ್ನ ‘ಮಹಾರಾಜ್’ ಸಿನಿಮಾವನ್ನು ವಿಎಚ್ಪಿ ಸದಸ್ಯರಿಗೆ ತೋರಿಸಬೇಕು. ಆ ಬಳಿಕ ಮುಂದಿನ ನಿರ್ಧಾರ ತಿಳಿಸಲಾಗುವುದು. ಸಿನಿಮಾದಲ್ಲಿ ಆಕ್ಷೇಪಾರ್ಹ ಅಂಶ ಇದ್ದರೆ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
‘ಮಹಾರಾಜ್’ ಸಿನಿಮಾದಲ್ಲಿ ಜುನೈದ್ ಖಾನ್ ಜೊತೆ ‘ಪಾತಾಳ್ ಲೋಕ್’ ಖ್ಯಾತಿಯ ಜಯದೀಪ್ ಅಹಲಾವತ್ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಶಾಲಿನಿ ಪಾಂಡೆ ಮತ್ತು ಶಾರ್ವರಿ ಅವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ಹಿಚ್ಕಿ’ ಸಿನಿಮಾದ ಖ್ಯಾತಿಯ ಸಿದ್ದಾರ್ಥ್ ಪಿ. ಮಲ್ಹೋತ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮಹಾರಾಜ್’ ಮಾತ್ರವಲ್ಲದೇ ಇನ್ನೂ ಕೆಲವು ಸಿನಿಮಾಗಳನ್ನು ಜುನೈದ್ ಖಾನ್ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳ ಶೂಟಿಂಗ್ ಪ್ರಗತಿಯಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.