ಸಲ್ಮಾನ್ ತಡವಾಗಿ ಬರ್ತಿದ್ರು, ಹಾಗಾಗಿ ಸೆಟ್‌ನಲ್ಲೇ ಜಿಮ್ ಮಾಡ್ತಿದ್ದೆ: ಕಾಜಲ್ ಅಗರ್ವಾಲ್

ನಟಿ ಕಾಜಲ್ ಅಗರ್ವಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವಿನ ವ್ಯತ್ಯಾಸಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸಮಯಪ್ರಜ್ಞೆಯ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಶೂಟಿಂಗ್ ಸೆಟ್‌ಗೆ ನಟ ಸಲ್ಮಾನ್ ಖಾನ್ ತಡವಾಗಿ ಬರುತ್ತಿದ್ದ ಅಭ್ಯಾಸವನ್ನು ರಿವೀಲ್ ಮಾಡಿದ್ದಾರೆ. ಇದೇ ವೇಳೆ ಚಿತ್ರರಂಗದಲ್ಲಿ ನಾಯಕಿಯರಿಗಾಗಿ ಗಟ್ಟಿ ಪಾತ್ರಗಳು ಸೃಷ್ಟಿಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ತಡವಾಗಿ ಬರ್ತಿದ್ರು, ಹಾಗಾಗಿ ಸೆಟ್‌ನಲ್ಲೇ ಜಿಮ್ ಮಾಡ್ತಿದ್ದೆ: ಕಾಜಲ್ ಅಗರ್ವಾಲ್
ಸಲ್ಮಾನ್-ಕಾಜಲ್
Edited By:

Updated on: Jul 22, 2026 | 7:43 AM

ಮುಖ್ಯಾಂಶಗಳು

  • ಬಾಲಿವುಡ್‌ನಲ್ಲಿ ಸಮಯಪ್ರಜ್ಞೆಯೇ ಇಲ್ಲ
  • ಸೌತ್ ಚಿತ್ರರಂಗದ ಶಿಸ್ತನ್ನು ಕೊಂಡಾಡಿದ ನಟಿ ಕಾಜಲ್
  • ಬಾಲಿವುಡ್ ಸುಲ್ತಾನ್ ಕೆಟ್ಟ ಅಭ್ಯಾಸ ಬಿಚ್ಚಿಟ್ಟ ನಾಯಕಿ

ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಹೋಲಿಕೆ ಇಂದಿನದೇನಲ್ಲ. ಸೌತ್ ಸಿನಿಮಾಗಳ ಮೇಕಿಂಗ್, ಕಥೆ ಮತ್ತು ನಿರ್ದೇಶನದ ಶಿಸ್ತನ್ನು ನೋಡಿ ಬಾಲಿವುಡ್‌ನವರು ಕಲಿಯಬೇಕಾದದ್ದು ತುಂಬಾನೇ ಇದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ವಿಷಯವಾಗಿ ಸೌತ್ ಹಾಗೂ ನಾರ್ತ್ ಎರಡೂ ಕಡೆ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಕೆಟ್ಟ ಅಭ್ಯಾಸವೊಂದನ್ನು ರಿವೀಲ್ ಮಾಡಿದ್ದಾರೆ.

ಬಾಲಿವುಡ್‌ಗಿಂತ ಸೌತ್ ಇಂಡಸ್ಟ್ರಿನೇ ಬೆಸ್ಟ್ ಅಂದಿದ್ದೇಕೆ ಕಾಜಲ್?

ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಜಲ್ ಅಗರ್ವಾಲ್, ಹಿಂದಿ ಚಿತ್ರರಂಗದಲ್ಲಿ ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

‘ಮೊದಲನೆಯದಾಗಿ ಬಾಲಿವುಡ್‌ನವರು ದಕ್ಷಿಣ ಭಾರತದ ಚಿತ್ರರಂಗದಿಂದ ಸಮಯಪಾಲನೆ ಕಲಿಯಬೇಕು. ಹಿಂದಿ ಚಿತ್ರರಂಗದಲ್ಲಿ ಸರಿಯಾದ ಸಮಯ ಪ್ರಜ್ಞೆಯೇ ಇರುವುದಿಲ್ಲ. ಆದರೆ ಸೌತ್‌ನಲ್ಲಿ ಪ್ರತಿಯೊಂದೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ನಾನು ಕೆಲಸದ ವಿಷಯದಲ್ಲಿ ಶಿಸ್ತು ಮತ್ತು ಸಮಯಪಾಲನೆಯನ್ನು ಇಷ್ಟಪಡುತ್ತೇನೆ. ಆದರೆ ಬಾಲಿವುಡ್‌ನಲ್ಲಿ ಇದು ಕಾಣಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್‌ಗಾಗಿ ಸೆಟ್‌ನಲ್ಲೇ ಜಿಮ್ ಮಾಡ್ತಿದ್ದೆ

ಯಾವುದಾದರೂ ನಟನಿಗಾಗಿ ನೀವು ಶೂಟಿಂಗ್ ಸೆಟ್‌ನಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂದಿತ್ತೇ? ಎಂಬ ಪ್ರಶ್ನೆಗೆ ಕಾಜಲ್ ನೇರವಾಗಿ ಸಲ್ಮಾನ್ ಖಾನ್ ಹೆಸರನ್ನು ಹೇಳಿದ್ದಾರೆ.

‘ಸಲ್ಮಾನ್ ಖಾನ್ ಶೂಟಿಂಗ್‌ಗೆ ಬರುವುದು ತಡವಾಗುತ್ತಿತ್ತು. ಅವರು ಮಧ್ಯಾಹ್ನ ಅಥವಾ ಸಂಜೆ ಸೆಟ್‌ಗೆ ಬರುತ್ತಿದ್ದರು. ಸೌತ್‌ನ ಶಿಸ್ತು ಮತ್ತು ಸಮಯಪಾಲನೆಗೆ ಒಗ್ಗಿಕೊಂಡಿದ್ದ ನನಗೆ ಇದು ತುಂಬಾ ಆಶ್ಚರ್ಯ ತಂದಿತ್ತು. ಅವರು ಬರುವವರೆಗೂ ಕಾಯಬೇಕಿದ್ದರಿಂದ, ನಾನು ಶೂಟಿಂಗ್ ಸೆಟ್‌ನಲ್ಲೇ ಜಿಮ್ ಮಾಡಿಕೊಂಡು ಸಮಯ ಕಳೆಯುತ್ತಿದ್ದೆ’ ಎಂದು ಕಾಜಲ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ರಿಲೀಸ್?

ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯರಿಗೂ ಪ್ರಾಮುಖ್ಯತೆ ಇರುವ ಮತ್ತು ನಟಿಸಲು ಹೆಚ್ಚಿನ ಅವಕಾಶವಿರುವ ಗಟ್ಟಿ ಪಾತ್ರಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us