2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ರಿಲೀಸ್?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಾತೃಭೂಮಿ’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಗೆ ಅನುಮತಿ ಸಿಗಲಲ್ಲ. ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಿದರೂ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಸಲ್ಮಾನ್ ಖಾನ್ ನಟನೆಯ ಈ ಚಿತ್ರದ ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಾಂಶಗಳು
- ಸಂಘರ್ಷದ ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣ ಆಗಿದೆ ‘ಮಾತೃಭೂಮಿ’ ಸಿನಿಮಾ.
- ಚಿತ್ರದ ಸೂಕ್ಷ್ಮ ವಿಷಯಗಳ ಕುರಿತು ರಕ್ಷಣಾ ಸಚಿವಾಲಯ ಆಕ್ಷೇಪ ಎತ್ತಿದ್ದಕ್ಕೆ ರಿಲೀಸ್ ವಿಳಂಬ.
- ನಿರ್ಮಾಪಕರು ಈ ವರ್ಷವೇ ರಿಲೀಸ್ ಮಾಡಲು ಯತ್ನಿಸುತ್ತಿದ್ದರೂ ಚಿತ್ರಕ್ಕೆ ಸಿಗುತ್ತಿಲ್ಲ ಅನುಮತಿ.
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ನಟನೆಯ, ಬಹುನಿರೀಕ್ಷಿತ ‘ಮಾತೃಭೂಮಿ’ (Maatrubhumi) ಸಿನಿಮಾದ ಬಿಡುಗಡೆ ದಿನಾಂಕವು ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆರಂಭದಲ್ಲಿ ‘ಬ್ಯಾಟಲ್ ಆಫ್ ಗಲ್ವಾನ್’ (Battle Of Galwan) ಎಂದು ಹೆಸರಿಡಲಾಗಿದ್ದ ಈ ಸಿನಿಮಾಗೆ ಜಾಗತಿಕ ಮಟ್ಟದ ರಾಜತಾಂತ್ರಿಕ ವಿಘ್ನಗಳು ಎದುರಾಗಿವೆ. ಆದ್ದರಿಂದ ಸಿನಿಮಾದ ರಿಲೀಸ್ ದಿನಾಂಕವು 2027ಕ್ಕೆ ಶಿಫ್ಟ್ ಆಗಬಹುದು ಎನ್ನಲಾಗುತ್ತಿದೆ.
ರಕ್ಷಣಾ ಸಚಿವಾಲಯದ ಆಕ್ಷೇಪ?
ಈ ಚಿತ್ರವು 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಕಥಾಹಂದರವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರದಲ್ಲಿರುವ ಕೆಲವು ಸೂಕ್ಷ್ಮ ವಿಷಯಗಳು ಮತ್ತು ಚೀನಾದ ನೇರ ಉಲ್ಲೇಖಗಳ ಕುರಿತು ಭಾರತೀಯ ರಕ್ಷಣಾ ಸಚಿವಾಲಯವು ಕೆಲವು ಆಕ್ಷೇಪಣೆಗಳನ್ನು ಎತ್ತಿದೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಚಿತ್ರಕ್ಕೆ ಅಗತ್ಯವಿರುವ ಕ್ಲಿಯರೆನ್ಸ್ ಸಿಗುವುದು ತಡವಾಗುತ್ತಿದೆ.
ವರ್ಷಾಂತ್ಯಕ್ಕೆ ಬರಲಿದೆಯೇ ಸಿನಿಮಾ?
ಚಿತ್ರದ ನಿರ್ಮಾಪಕರು ಈ ವರ್ಷದ ಅಂತ್ಯದೊಳಗೆ ಚಿತ್ರವನ್ನು ಹೇಗಾದರೂ ಮಾಡಿ ಚಿತ್ರಮಂದಿರಗಳಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅನುಮತಿ ಸಿಗುವುದು ಮತ್ತಷ್ಟು ವಿಳಂಬವಾದರೆ ಸಿನಿಮಾ ಬಿಡುಗಡೆ 2027ಕ್ಕೆ ಮುಂದೂಡಲ್ಪಡುವುದು ಅನಿವಾರ್ಯವಾಗಲಿದೆ. ಸಿನಿಮಾದ ವಿವಾದಾತ್ಮಕ ಅಂಶಗಳ ಕುರಿತಾದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಒಂದು ವೇಳೆ ಶೀಘ್ರದಲ್ಲೇ ಇದು ಇತ್ಯರ್ಥವಾದರೂ, ಬಾಲಿವುಡ್‌ನಲ್ಲಿ ಈಗಾಗಲೇ ಪ್ರಮುಖ ರಿಲೀಸ್ ಡೇಟ್‌ಗಳನ್ನು ಬೇರೆ ದೊಡ್ಡ ಸಿನಿಮಾಗಳು ಕಾಯ್ದಿರಿಸಿವೆ. ಹೀಗಾಗಿ ‘ಮಾತೃಭೂಮಿ’ ಚಿತ್ರಕ್ಕೆ ಉತ್ತಮ ಸ್ಲಾಟ್ ಸಿಗುವುದು ಕಷ್ಟ ಎಂಬ ಅಭಿಪ್ರಾಯ ಇದೆ.
ದಸರಾ ರಜೆಯ ಮೇಲೆ ಕಣ್ಣು:
ಒಂದು ವೇಳೆ ಈ ವರ್ಷವೇ ಸಿನಿಮಾ ಬಿಡುಗಡೆಯಾಗುವುದಾದರೆ, ಅಕ್ಟೋಬರ್ 20ರಂದು (ಮಂಗಳವಾರ) ದಸರಾ ಹಬ್ಬ ಇರುವುದರಿಂದ, ಚಿತ್ರಕ್ಕೆ 5 ದಿನಗಳ ಸುದೀರ್ಘ ವೀಕೆಂಡ್ ಸಿಗುವ ಅವಕಾಶವಿದೆ. ಇದಲ್ಲದೆ, ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಅಕ್ಟೋಬರ್ 30ಕ್ಕೆ ಪ್ರೀಪೋನ್ ಆಗುವ ಸಾಧ್ಯತೆ ಇದೆ. ಅದರ ನಂತರ ನವೆಂಬರ್ ಕೊನೆಯ ವಾರದವರೆಗೂ ಯಾವುದೇ ದೊಡ್ಡ ಸಿನಿಮಾಗಳು ಇಲ್ಲದಿರುವುದರಿಂದ, ಅದು ಕೂಡ ‘ಮಾತೃಭೂಮಿ’ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಬಹುದು.
ಇದನ್ನೂ ಓದಿ: 52 ವರ್ಷಗಳಿಂದ ಸಲ್ಮಾನ್ ಖಾನ್ ಕೇವಲ 1 ಬಿಎಚ್ಕೆ ಮನೆಯಲ್ಲಿ ವಾಸಿಸುತ್ತಿರುವುದೇಕೆ ಗೊತ್ತಾ?
ಅಪೂರ್ವ ಲಖಿಯಾ ನಿರ್ದೇಶನದ, ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆರಂಭದಲ್ಲಿ ಏಪ್ರಿಲ್ 17ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸಾಲು ಸಾಲು ಅಡೆತಡೆಗಳಿಂದಾಗಿ ಮುಂದೂಡಲ್ಪಡುತ್ತಲೇ ಸಾಗಿದೆ. ಒಂದು ವೇಳೆ ಈ ವರ್ಷ ಈ ಸಿನಿಮಾ ಬರದಿದ್ದರೆ, 2026ರಲ್ಲಿ ಸಲ್ಮಾನ್ ಖಾನ್ ಅವರ ಯಾವುದೇ ಚಿತ್ರಗಳು ತೆರೆಕಂಡಂತಾಗುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




