ಒಂದು ಕಾಲದಲ್ಲಿ ನಟಿ ಕಾಜೊಲ್ (Kajol) ಮತ್ತು ಶಾರುಖ್ ಖಾನ್ (Shah Rukh Khan) ಅವರದ್ದು ಬಾಲಿವುಡ್ನಲ್ಲಿ ಸೂಪರ್ ಹಿಟ್ ಜೋಡಿ ಆಗಿತ್ತು. ಡಿಲ್ವಾಲೆ ದುಹ್ಲನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ, ಬಾಜಿಗರ್ ಮುಂತಾದ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದರು. ಇಂದಿಗೂ ಅವರನ್ನು ತೆರೆಮೇಲೆ ಜೋಡಿಯಾಗಿ ನೋಡಲು ಅಭಿಮಾನಿಗಳು ಬಯಸುತ್ತಾರೆ. ಆ ಬಗ್ಗೆ ಇತ್ತೀಚೆಗೆ ಗುಸುಗುಸು ಕೇಳಿಬಂದಿತ್ತು. ಅದರ ಕುರಿತು ಕಾಜೊಲ್ ಈಗ ಸ್ವಷ್ಟನೆ ನೀಡಿದ್ದಾರೆ. ಇಂದು (ಆ.5) ಅವರಿಗೆ ಜನ್ಮದಿನದ (Kajol Birthday) ಸಂಭ್ರಮ. ಈ ವಿಶೇಷ ದಿನದಂದೇ ಅವರು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದಾರೆ.
‘ಜೀರೋ’ ಸಿನಿಮಾದ ಸೋಲಿನ ಬಳಿಕ ಶಾರುಖ್ ಖಾನ್ ದೊಡ್ಡ ಗ್ಯಾಪ್ ಪಡೆದುಕೊಂಡರು. ತಮ್ಮ ಕಮ್ಬ್ಯಾಕ್ ಸಲುವಾಗಿ ಅವರು ಪಕ್ಕಾ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಬಾಲಿವುಡ್ನಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ನಿರ್ದೇಶಕ ರಾಜ್ಕುಮಾರ್ ಹಿರಾನಿ ಜೊತೆಗೆ ಶಾರುಖ್ ಸಿನಿಮಾ ಮಾಡುತ್ತಾರೆ ಹಾಗೂ ಆ ಚಿತ್ರವೇ ಅವರ ಕಮ್ಬ್ಯಾಕ್ ಪ್ರಾಜೆಕ್ಟ್ ಆಗಲಿದೆ ಎಂದು ಬಿಟೌನ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿತ್ತು. ಅದೇ ಚಿತ್ರದಲ್ಲಿ ಶಾರುಖ್ ಮತ್ತು ಕಾಜೊಲ್ ಜೋಡಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ, ಅದನ್ನು ಕಾಜೊಲ್ ತಳ್ಳಿಹಾಕಿದ್ದಾರೆ.
‘ನಿರ್ದೇಶಕ ರಾಜ್ಕುಮಾರ್ ಹಿರಾನಿ ಅಥವಾ ಅವರ ತಂಡದ ಯಾರೊಬ್ಬರೂ ನನ್ನನ್ನು ಈವರೆಗೆ ಸಂಪರ್ಕಿಸಿಲ್ಲ. ಬೇರೆ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ವಿಡಿಯೋ ಕಾಲ್ ಮೂಲಕ ಮೀಟಿಂಗ್ ನಡೆಸುತ್ತಿದ್ದೇನೆ. ಆದರೆ ಸದ್ಯಕ್ಕೆ ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ’ ಎನ್ನುವ ಮೂಲಕ ಹರಿದಾಡಿದ್ದ ಗಾಸಿಪ್ಗಳಿಗೆ ಅವರು ಫುಲ್ಸ್ಟಾಪ್ ಇಟ್ಟಿದ್ದಾರೆ. ಅಜಯ್ ದೇವಗನ್ ನಾಯಕತ್ವದ ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಚಿತ್ರದಲ್ಲಿ ಅವರ ಪತ್ನಿಯ ಪಾತ್ರಕ್ಕೆ ಕಾಜೊಲ್ ಬಣ್ಣ ಹಚ್ಚಿದ್ದರು. ಆ ಸಿನಿಮಾ 2020ರ ಆರಂಭದಲ್ಲಿ ತೆರೆಕಂಡು ಭರ್ಜರಿ ಗೆಲುವು ಸಾಧಿಸಿತ್ತು. ಆ ಬಳಿಕ ‘ದೇವಿ’ ಕಿರುಚಿತ್ರ ಹಾಗೂ ನೆಟ್ಫ್ಲಿಕ್ಸ್ನ ‘ತ್ರಿಭಂಗ’ ಸಿನಿಮಾದಲ್ಲಿ ಅವರು ನಟಿಸಿದರು.
ಸದ್ಯ ಶಾರುಖ್ ಅವರು ‘ಪಠಾಣ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿರುವ ಸಿನಿಮಾ ಆಗಿರಲಿದ್ದು, ಶಾರುಖ್ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಆಗಿ ಅಭಿನಯಿಸುತ್ತಿರುವುದು ವಿಶೇಷ.
ಇದನ್ನೂ ಓದಿ:
‘ಶಾರುಖ್ ಖಾನ್ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?
ಕೋಟಿ ಕೋಟಿ ಸಂಭಾವನೆ ಪಡೆದರೂ ಅಜಯ್ ದೇವಗನ್ ಹೆಸರಲ್ಲಿದೆ ದೊಡ್ಡ ಮೊತ್ತದ ಸಾಲ