ಆಲಿಯಾ ಭಟ್ (Alia Bhatt) ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi) ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಈಗಾಗಲೇ ಭಾರತದ ಬಾಕ್ಸ್ ಆಫೀಸ್ನಲ್ಲಿ 92.22 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾದ ಕಲೆಕ್ಷನ್ 100 ಕೋಟಿ ದಾಟಿದೆ. ಆದರೆ, ‘ಗಂಗೂಬಾಯಿ ಕಾಠಿಯಾವಾಡಿ’ ಬಾಕ್ಸ್ ಆಫೀಸ್ ಕಲೆಕ್ಷನ್ (Gangubai Kathiawadi Box Office Collection)) ವಿಚಾರದಲ್ಲಿ ದೊಡ್ಡ ಸ್ಕ್ಯಾಮ್ ನಡೆದಿದೆಯಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗಿದೆ. ಕೆಲ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಈ ವಿಚಾರ ಇಟ್ಟುಕೊಂಡು ಕಂಗನಾ ವ್ಯಂಗ್ಯವಾಡಿದ್ದಾರೆ.
ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರ ಮೊದಲ ಮೂರು ದಿನದಲ್ಲೇ ಅದ್ಭುತ ಕಲೆಕ್ಷನ್ ಮಾಡಿತ್ತು. ಭಾನುವಾರ (ಮಾರ್ಚ್ 7) 10 ಕೋಟಿ ಕಲೆಕ್ಷನ್ ಮಾಡಿ ಸಿನಿಮಾ ಭೇಷ್ ಎನಿಸಿಕೊಂಡಿದೆ. ಆದರೆ, ಈ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲ ಅನುಮಾನ ಹುಟ್ಟಿಕೊಂಡಿದೆ.
ಔಟ್ಲುಕ್ ಮ್ಯಾಗಜಿನ್ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ಆರ್ಟಿಕಲ್ ಒಂದನ್ನು ಬರೆಯಲಾಗಿದೆ. ‘ಇತ್ತೀಚೆಗೆ ತೆರೆಕಂಡ ಸ್ಟಾರ್ ನಟಿಯ ಸಿನಿಮಾ ಯಶಸ್ಸು ಗಳಿಸಿದೆ ಎಂದು ಬಿಂಬಿಸಲಾಗಿದೆ. ಆದರೆ, ಸಿನಿಮಾ ಪಂಡಿತರು ಹೇಳುವುದೇ ಬೇರೆ. ವಾರಾಂತ್ಯದ ಕಲೆಕ್ಷನ್ಅನ್ನು ದ್ವಿಗುಣ ಮಾಡಿ ತೋರಿಸಲಾಗುತ್ತಿದೆ’ ಎಂದು ಬರೆಯಲಾಗಿದೆ. ಈ ಆರ್ಟಿಕಲ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಆರ್ಟಿಕಲ್ನ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿರುವ ಕಂಗನಾ, ‘ಹಾಲಿಗೆ ನೀರು ಹಾಕುವುದನ್ನು ಕೇಳಿದ್ದೇವೆ. ಆದರೆ, ನೀರಿಗೆ ಹಾಲನ್ನು ಹಾಕಲಾಗುತ್ತಿದೆ’ ಎಂದು ಟೀಕಿಸಿದ್ದಾರೆ. ಈ ಮೂಲಕ ಆಲಿಯಾ ಭಟ್ ವಿರುದ್ಧ ಅವರು ಟೀಕೆ ಮುಂದುವರಿಸಿದ್ದಾರೆ.
ಆಲಿಯಾ ಭಟ್ ಅವರು ನೆಪೋಟಿಸಂ ಫಲಾಭವಿ ಎಂದು ಕಂಗನಾ ಯಾವಾಗಲೂ ಟೀಕೆ ಮಾಡುತ್ತಾರೆ. ಆ ಕಾರಣಕ್ಕಾಗಿ ಅವರು ಆಲಿಯಾ ನಟನೆಯ ಸಿನಿಮಾಗಳೆಂದರೆ ಮೂಗು ಮುರಿಯುತ್ತಾರೆ. ಆದರೆ ಈ ಬಾರಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಜನರಿಂದ ಸಿಕ್ಕ ಬಗ್ಗೆ ಕಂಗನಾ ಬೆರಗಾಗಿದ್ದರು. ಹಾಗಾಗಿ ಅವರು ಈ ಚಿತ್ರವನ್ನು ಮನಸಾರೆ ಹೊಗಳಿದ್ದರು. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
‘ದಕ್ಷಿಣ ಭಾರತದ ಸಿನಿಮಾಗಳ ದಾಖಲೆಯ ಕಲೆಕ್ಷನ್ನಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಕಳೆ ಬಂದಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಸೂಪರ್ ಸ್ಟಾರ್ ಡೈರೆಕ್ಟರ್, ಸ್ಟಾರ್ ಹೀರೋ ಇರುವ ಒಂದು ಮಹಿಳಾ ಪ್ರಧಾನ ಸಿನಿಮಾದಿಂದ ಹಿಂದಿ ಚಿತ್ರರಂಗ ಕೂಡ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಪುಟ್ಟ ಹೆಜ್ಜೆಗಳೇ ಆಗಿರಬಹುದು, ಆದರೆ ಅವು ಮಹತ್ವವಾದವು. ಕಷ್ಟದ ಪರಿಸ್ಥಿತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಈ ಬೆಳವಣಿಗೆ ತುಂಬ ಮುಖ್ಯ. ಗ್ರೇಟ್! ಇಂಥ ಸಂದರ್ಭದಲ್ಲಿ ಮೂವೀ ಮಾಫಿಯಾದವರು ಒಳ್ಳೆಯ ಕೆಲಸ ಮಾಡ್ತಾರೆ ಅಂಥ ನಾನು ನಿರೀಕ್ಷಿಸಿರಲಿಲ್ಲ. ಅವರು ಒಳ್ಳೆಯದು ಮಾಡಿದಾಗ ನಾನು ಖಂಡಿತಾ ಹೊಗಳುತ್ತೇನೆ. ಇನ್ನೂ ಒಳ್ಳೆಯದನ್ನು ನಿರೀಕ್ಷಿಸುತ್ತೇನೆ’ ಎಂದು ಕಂಗನಾ ರಣಾವತ್ ಅವರು ಬರೆದುಕೊಂಡಿದ್ದರು. ಆದರೆ, ಈಗ ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ: ‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್ ದೇವಗನ್ಗೆ ಸಿಕ್ಕಿದ್ದೆಷ್ಟು?
ಆಲಿಯಾ ಭಟ್ ಬಾಯ್ಫ್ರೆಂಡ್ ಮೇಲೆ ಕಣ್ಣಿಟ್ಟ ಪೂಜಾ ಹೆಗ್ಡೆ; ಏನಿದು ಹೊಸ ಕಥೆ?