ಕಂಗನಾ ರಣಾವತ್ ಅವರು ಅನೇಕ ಹೀರೋ-ಹೀರೋಯಿನ್ಗಳ ಮೇಲೆ, ಸ್ಟಾರ್ ಕಿಡ್ಗಳ ಮೇಲೆ, ಖ್ಯಾತ ನಿರ್ಮಾಪಕರ ಮೇಲೆ ಕೂಗಾಟ ನಡೆಸುತ್ತಾ ಇರುತ್ತಾರೆ. ವಿವಿಧ ರೀತಿಯ ಆರೋಪಗಳನ್ನು ಅವರು ಮಾಡುತ್ತಾರೆ. ಈಗ ಅವರ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನವೂ ಇದೆ. ಜನವರಿ 17ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರದಲ್ಲಿ ಕಂಗನಾ ಭಾಗಿ ಆಗುತ್ತಿದ್ದಾರೆ. ಈ ವೇಳೆ ಅವರು ಕರಣ್ ಅವರ ಕಾಲನ್ನು ಎಳೆದಿದ್ದಾರೆ. ಅವರಿಗೆ ಸಿನಿಮಾ ಆಫರ್ ಕೂಡ ನೀಡಿದ್ದಾರೆ.
‘ಇದನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ, ಕರಣ್ ಜೋಹರ್ ಸರ್ ಜೊತೆ ಸಿನಿಮಾ ಮಾಡಬೇಕು. ಅವರಿಗೆ ನಾನು ಒಳ್ಳೆಯ ಪಾತ್ರವನ್ನೇ ನೀಡುತ್ತೇನೆ. ನಾನು ಒಳ್ಳೆಯ ಸಿನಿಮಾನೇ ಮಾಡುತ್ತೇನೆ. ಅದು ಅತ್ತೆ-ಸೊಸೆ ಜಗಳ ಅಲ್ಲ. ಇದು ಒಂದೊಳ್ಳೆಯ ಸಿನಿಮಾ. ಅವರಿಗೂ ಒಳ್ಳೆಯ ಪಾತ್ರ ಸಿಗುತ್ತದೆ’ ಎಂದಿದ್ದಾರೆ ಕಂಗನಾ.
ಈ ಮೊದಲು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅತ್ತೆ ಹಾಗೂ ಸೊಸೆಯ ಮಧ್ಯೆ ಜಗಳ ಏರ್ಪಡುವ ದೃಶ್ಯಗಳಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಂಗನಾ ಈ ರೀತಿ ಹೇಳಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ರೀತಿಯ ಸಿನಿಮಾಗಳು ಕಂಗನಾಗೆ ಇಷ್ಟ ಆಗುವುದಿಲ್ಲ.
ಕಂಗನಾ ರಣಾವತ್ ಹಾಗೂ ಕರಣ್ ಮಧ್ಯೆ ಕಿರಿಕ್ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಕಂಗನಾ ಅವರು ಕರಣ್ ಜೋಹರ್ ವಿರುದ್ಧ ಸಿಟ್ಟಾಗಿದ್ದರು. 2017ರಲ್ಲಿ ಕಂಗನಾ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಅವರು ಅಲ್ಲಿಯೇ ಕರಣ್ ವಿರುದ್ಧ ಹರಿಹಾಯ್ದಿದ್ದರು. ಅವರದ್ದೇ ಶೋನಲ್ಲಿ ಕರಣ್ ಮರ್ಯಾದೆಯನ್ನು ತೆಗೆದಿದ್ದರು. ಕಂಗನಾ ಅವಕಾಶ ಸಿಕ್ಕಾಗಲೆಲ್ಲ ಕರಣ್ ಅವರಿಗೆ ಅವಮಾನ ಮಾಡಲು ಕಾಯುತ್ತಾ ಇರುತ್ತಾರೆ.
ಇದನ್ನೂ ಓದಿ: ‘ರಾಜಕೀಯ ವಿಚಾರಗಳ ಸಿನಿಮಾ ಮಾಡಲ್ಲ‘: ‘ಎಮರ್ಜೆನ್ಸಿ’ ಚಿತ್ರ ಮಾಡಿ ಸುಸ್ತಾದ ಕಂಗನಾ
ಸದ್ಯ ಕಂಗನಾ ‘ಎಮರ್ಜೆನ್ಸಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಅವರೇ ನಿರ್ಮಾಪಕಿಯೂ ಹೌದು. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಜನವರಿ 17ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.