ಸಿನಿಮಾ ರಂಗದಲ್ಲಿ ಸೋಲು-ಗೆಲುವು ಸಹಜ. ಆದರೆ ತೀರಾ ಹೀನಾಯಾವಾಗಿ ಸೋತರೆ ಸಖತ್ ಬೇಸರ ಆಗುತ್ತದೆ. ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ನಿಜಕ್ಕೂ ಅಂತಹ ದುಸ್ಥಿತಿ ಬಂದಿದೆ. ಅವರು ಬಾಲಿವುಡ್ನಲ್ಲಿ (Bollywood) ಲೇಡಿ ಸೂಪರ್ ಸ್ಟಾರ್ ರೀತಿ ವರ್ತಿಸುತ್ತಿದ್ದರು. ಹಿಂದಿ ಚಿತ್ರರಂಗದ ಬೇರೆ ನಟ-ನಟಿಯರನ್ನು, ನಿರ್ದೇಶಕರನ್ನು ಹೀಯಾಳಿಸುತ್ತಿದ್ದರು. ಆದರೆ ಈಗ ಅವರ ಸಿನಿಮಾವೇ ಹೀನಾಯವಾಗಿ ಸೋತಿದೆ. ಕಂಗನಾ ರಣಾವತ್ ನಟನೆಯ ‘ಧಾಕಡ್’ ಚಿತ್ರ (Dhaakad Movie) ಮೇ 20ರಂದು ವಿಶ್ವಾದ್ಯಂತ ಬಿಡುಗಡೆ ಆಯಿತು. ಮೂರು ದಿನ ಕಳೆಯುವುದರೊಳಗೆ ಈ ಚಿತ್ರ ಗಂಟುಮೂಟೆ ಕಟ್ಟಿಕೊಂಡು ಥಿಯೇಟರ್ನಿಂದ ಎತ್ತಂಗಡಿ ಆಗಿದೆ. ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ನೋಡಲು ಒಬ್ಬನೇ ಒಬ್ಬ ಪ್ರೇಕ್ಷಕ ಕೂಡ ಬಂದಿಲ್ಲ ಎಂಬುದು ವಿಪರ್ಯಾಸ! ಹಾಗಾಗಿ ಚಿತ್ರಮಂದಿರದವರು ಈ ಸಿನಿಮಾದ ಶೋ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದಾಗಿ ಕಂಗನಾ ರಣಾವತ್ ಅವರಿಗೆ ತೀವ್ರ ಮುಖಭಂಗ ಆಗಿದೆ. ಇದು ಅವರ ವೃತ್ತಿಜೀವನದ ಅತಿ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ. ‘ಧಾಕಡ್’ ಚಿತ್ರದ ಕಳಪೆ ಪ್ರದರ್ಶನದಿಂದಾಗಿ ಕಂಗನಾ ರಣಾವತ್ ಅವರ ಚಾರ್ಮ್ ಕುಸಿದು ಹೋಗಿದೆ.
‘ಧಾಕಡ್’ ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ಆ್ಯಕ್ಷನ್ ಅವತಾರ ತಾಳಿದ್ದಾರೆ. ಭರ್ಜರಿಯಾಗಿ ಅವರು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಟ್ರೇಲರ್ ಬಿಡುಗಡೆ ಆದಾಗ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಸಲ್ಮಾನ್ ಖಾನ್ ಕೂಡ ಈ ಚಿತ್ರದ ಟ್ರೇಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದರು. ಏನೇ ಮಾಡಿದರೂ ಕೂಡ ಈ ಸಿನಿಮಾ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೇ 20ರಂದು ‘ಧಾಕಡ್’ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದವು. ಸಿನಿಮಾ ನೋಡಿದ ಕೆಲವೇ ಕೆಲವು ಮಂದಿ ಕೂಡ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿಲ್ಲ. ಇದರಿಂದಾಗಿ ‘ಧಾಕಡ್’ ಚಿತ್ರ ತೀವ್ರ ಸೋಲು ಅನುಭವಿಸಿದೆ.
ಇದನ್ನೂ ಓದಿ: ಕಂಗನಾ ರಣಾವತ್ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್; ಏನದು?
ಹಿಂದಿ ಚಿತ್ರರಂಗದಲ್ಲಿ ಇದನ್ನು ಡಿಸಾಸ್ಟರ್ ಎನ್ನದೇ ಬೇರೇನೂ ಹೇಳಲು ಸಾಧ್ಯವಿಲ್ಲ. ಬಾಲಿವುಡ್ ಸ್ಟಾರ್ ಕಲಾವಿದರ ಚಿತ್ರಗಳು ಮೊದಲ ದಿನ ಕನಿಷ್ಠ ಪ್ರಮಾಣದ ಕಲೆಕ್ಷನ್ ಮಾಡುತ್ತವೆ. ಆದರೆ ಕಂಗನಾ ರಣಾವತ್ ನಟನೆಯ ‘ಧಾಕಡ್’ ಮಾಡಿದ್ದು ಕೇವಲ 50 ಲಕ್ಷ ರೂಪಾಯಿ. ಎರಡನೇ ದಿನವಾದ ಶನಿವಾರ (ಮೇ 21) ಕೂಡ ಪರಿಸ್ಥಿತಿ ಸುಧಾರಿಸಲಿಲ್ಲ. ಅಂದು ಕೂಡ ಬರೀ 50 ಲಕ್ಷ ರೂ. ಗಳಿಸುವಲ್ಲಿ ಈ ಚಿತ್ರ ಹೈರಾಣಾಯಿತು. ಮೂರನೇ ದಿನವಾದ ಭಾನುವಾರ (ಮೇ 22) ಕೂಡ ಹೆಚ್ಚು-ಕಡಿಮೆ ಅಷ್ಟೇ ಕಲೆಕ್ಷನ್ ಆಗಿದೆ. ಇಷ್ಟು ಕಳಪೆ ಪ್ರದರ್ಶನ ನೀಡಿದ ‘ಧಾಕಡ್’ ಸಿನಿಮಾವನ್ನು ಕಿತ್ತೊಗೆಯದ ಹೊರತು ಚಿತ್ರಮಂದಿರದ ಮಾಲಿಕರಿಗೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ.
ಇದನ್ನೂ ಓದಿ: ‘ಅಜಯ್ ದೇವಗನ್ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್
‘ಧಾಕಡ್’ ಸಿನಿಮಾದ ಸೋಲಿಗೆ ಕೆಲವು ಕಾರಣಗಳಿವೆ. ಮೊದಲನೆಯದಾಗಿ ಇದು ‘ಎ’ ಪ್ರಮಾಣ ಪತ್ರ ಪಡೆದಿರುವ ಸಿನಿಮಾ. 18 ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳು ಈ ಸಿನಿಮಾವನ್ನು ನೋಡುವಂತಿಲ್ಲ. ಹಾಗಾಗಿ ಫ್ಯಾಮಿಲಿ ಆಡಿಯನ್ಸ್ ‘ಧಾಕಡ್’ ಕಡೆ ಸುಳಿದಿಲ್ಲ. ಇನ್ನು, ಕಂಗನಾ ರಣಾವತ್ ಅವರ ರಿಯಲ್ ಲೈಫ್ ವರ್ತನೆ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅದು ಕೂಡ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ, ಮೇ 20ರಂದು ಬಿಡುಗಡೆ ಆಗಿರುವ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ ಚಿತ್ರಕ್ಕೆ ಪೈಪೋಟಿ ನೀಡುವಲ್ಲಿ ‘ಧಾಕಡ್’ ವಿಫಲವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ಭೂಲ್ ಭುಲಯ್ಯ 2’ ಸಿನಿಮಾಗೆ ಆದ್ಯತೆ ನೀಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:01 pm, Mon, 23 May 22