ಕಂಗನಾ ರಣಾವತ್ (Kangana Ranaut) ಹಾಗೂ ಅವರ ಫ್ಯಾನ್ಸ್ ಬೇಸರದಲ್ಲಿದ್ದಾರೆ. ಕಂಗನಾ ನಟನೆಯ ‘ಧಾಕಡ್’ ಸಿನಿಮಾ (Dhaakad Movie) ಹೀನಾಯದಲ್ಲೇ ಹೀನಾಯ ಸೋಲು ಕಂಡಿದೆ. ಕೆಲವೇ ಕೆಲವು ಕೋಟಿ ಕಲೆಕ್ಷನ್ ಮಾಡಿದ ಈ ಚಿತ್ರಕ್ಕೂ ಒಟಿಟಿಯಲ್ಲೂ ಬೆಲೆ ಇಲ್ಲದಂತೆ ಆಗಿದೆ. ಇದರಿಂದ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕಂಗನಾ ಈ ಸಿನಿಮಾದಲ್ಲಿ ನಟಿಸಲೇಬಾರದಿತ್ತು ಎಂದು ಫ್ಯಾನ್ಸ್ ಹೇಳಿದ್ದುಂಟು. ಸಿನಿಮಾದಲ್ಲಿ ನಟಿಸಿ, ಅದು ರಿಲೀಸ್ ಆಗಿ, ಸೋತು ಹೋಗಿದ್ದೂ ಆಗಿದೆ. ಈಗ ಯಾವುದನ್ನೂ ತಿದ್ದೋಕೆ ಆಗುವುದಿಲ್ಲ. ಈ ಕಾರಣಕ್ಕೆ ಕಂಗನಾ ಮುಂದಿನ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬಾರಿ ಎಡವಲೇಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅವರೇ ನಿರ್ದೇಶನ ಮಾಡಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಕಂಗನಾ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.
‘ಧಾಕಡ್’ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಹೀಗಾಗಿ, ತಾವೇ ಮುಂದೆ ನಿಂತು ಸಿನಿಮಾ ಪ್ರಚಾರ ಮಾಡಿದ್ದರು. ತಿರುಪತಿಗೆ ಹೋಗಿ ಪೂಜೆ ಮಾಡಿ ಬಂದಿದ್ದರು. ಆದರೆ, ದೇವರು ಹಾಗೂ ಅಭಿಮಾನಿಗಳು ಅವರ ಕೈ ಹಿಡಿಯಲಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 3 ಕೋಟಿ ರೂಪಾಯಿ ಗಳಿಸಲೂ ಒದ್ದಾಡಿದೆ. ಇಷ್ಟು ದೊಡ್ಡ ಸ್ಟಾರ್ಡಮ್ ಇಟ್ಟುಕೊಂಡು ಚಿತ್ರಕ್ಕೆ ಈ ಮಟ್ಟದ ಸೋಲು ಆಗುತ್ತದೆ ಎಂದರೆ ಅದು ನಿಜಕ್ಕೂ ಅವಮಾನವೇ. ಆದರೆ, ಕಂಗನಾ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆಗಿದ್ದು ಆಯಿತು ಮುಂದಾದರೂ ಸರಿಯಾಗಿ ನಡೆಯೋಣ ಎನ್ನುವ ನಿರ್ಧಾರಕ್ಕೆ ಅವರು ಬಂದಂತಿದೆ.
ಇದನ್ನೂ ಓದಿ: ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್’ ಚಿತ್ರಕ್ಕೆ ಬೇಡಿಕೆ ಇಲ್ಲ
‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದವರು ಕಂಗನಾ. ಆ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ ‘ಎಮರ್ಜೆನ್ಸಿ’. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟುವಂತೆ ಮಾಡುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಕಂಗನಾ ಕೆಲಸ ಮಾಡುತ್ತಿದ್ದಾರೆ.
‘ಧಾಕಡ್’ ಚಿತ್ರಕ್ಕೆ ಕಥೆ ಬರೆದ ರಿತೇಶ್ ಷಾ ಅವರೇ ‘ಎಮರ್ಜೆನ್ಸಿ’ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಈ ಕಾರಣಕ್ಕೆ ಅಭಿಮಾನಿಗಳಿಗೆ ಕೊಂಚ ಅಳಕು ಇದೆ. ‘ಎಮರ್ಜೆನ್ಸಿ’ ಎಂದಾಗ ನೆನಪಿಗೆ ಬರೋದು ಇಂದಿರಾ ಗಾಂಧಿ. ಆದರೆ, ಇದು ಅವರ ಬಯೋಪಿಕ್ ಅಲ್ಲ. ಈ ಬಗ್ಗೆ ಕಂಗನಾ ಈ ಮೊದಲೇ ಸ್ಪಷ್ಟನೆ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.