ನಟಿಯರ ಚಾರಿತ್ರ್ಯ ವಧೆ ವಿರುದ್ಧ ದನಿ ಎತ್ತಿದ ಕಂಗನಾ ರಣಾವತ್: ತ್ರಿಷಾ ಕೃಷ್ಣನ್ ಉದಾಹರಣೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರು ಆಪ್ತವಾಗಿದ್ದಾರೆ. ಆ ಕಾರಣಕ್ಕೆ ತ್ರಿಷಾ ಅವರನ್ನು ಆಗಾಗ ಟ್ರೋಲ್ ಮಾಡಲಾಗುತ್ತದೆ. ಇದನ್ನು ನಟಿ ಕಂಗನಾ ರಣಾವತ್ ಅವರು ಖಂಡಿಸಿದ್ದಾರೆ. ನಟಿಯರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ನಟಿಯರ ಚಾರಿತ್ರ್ಯ ವಧೆ ವಿರುದ್ಧ ದನಿ ಎತ್ತಿದ ಕಂಗನಾ ರಣಾವತ್: ತ್ರಿಷಾ ಕೃಷ್ಣನ್ ಉದಾಹರಣೆ
Kangana Ranaut

Updated on: Sep 08, 2026 | 6:46 PM

ಕೆಲಸ ಮಾಡುವ ಮತ್ತು ಯಶಸ್ವಿ ಮಹಿಳೆಯರ ಚಾರಿತ್ರ್ಯ ವಧೆ ಮಾಡುವುದನ್ನು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಖಂಡಿಸಿದ್ದಾರೆ. ನಟಿ ತ್ರಿಷಾ ಕೃಷ್ಣನ್ ಅವರ ಇತ್ತೀಚಿನ ವಿವಾದವನ್ನು ಉಲ್ಲೇಖಿಸಿ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ಹಿಮಾಚಲ ಪ್ರದೇಶದ ಕುಲ್ಲುನಲ್ಲಿ ನಡೆದ ಸಭೆಯೊಂದರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ.

‘ಯಶಸ್ವಿ ನಟಿಯರು, ರಾಜಕಾರಣಿಗಳು ಹಾಗೂ ಅಧಿಕಾರದಲ್ಲಿರುವ ಮಹಿಳೆಯರನ್ನು ಕೆಳಗೆ ಬೀಳಿಸಲು ಅವರ ಚಾರಿತ್ರ್ಯವನ್ನು ಗುರಿಯಾಗಿಸುವುದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ನಡೆಯುತ್ತಿದೆ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ತಮಿಳುನಾಡಿನಲ್ಲಿ ನಡೆದ ಘಟನೆಯನ್ನು ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

‘ತಮಿಳುನಾಡಿನಲ್ಲಿ ಏನಾಯಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಅಲ್ಲಿ ಗೌರವಾನ್ವಿತ ನಟಿಯೊಬ್ಬರು ವಿವಾದಕ್ಕೆ ಸಿಲುಕಿದರು. ಯಾವುದೇ ಸಂಬಂಧ ಅಥವಾ ವಿಷಯ ಇಬ್ಬರ ನಡುವೆ ಇದ್ದರೂ, ನಿಂದನೆ ಮತ್ತು ಚಾರಿತ್ರ್ಯ ವಧೆಯ ಸರದಿ ಬಂದಾಗ ಯಾವಾಗಲೂ ಮಹಿಳೆಯನ್ನೇ ಗುರಿ ಮಾಡಲಾಗುತ್ತದೆ. ಇದು ತಕ್ಷಣವೇ ನಿಲ್ಲಬೇಕು’ ಎಂದು ಕಂಗನಾ ಅವರು ಹೇಳಿದ್ದಾರೆ.

ಏನಿದು ತ್ರಿಷಾ-ವಿಜಯ್ ವಿವಾದ?

ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾಗವಹಿಸಿದ್ದರು. ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿ ಶೋಭಾ ಅವರ ಪಕ್ಕದಲ್ಲಿ ತ್ರಿಷಾ ಕುಳಿತಿದ್ದರು. ಅವರನ್ನು ಅನೇಕರು ಟೀಕಿಸಿದ್ದರು.

ಇದನ್ನೂ ಓದಿ: ಕೃತಿ ಸನನ್ ಮಾಡಿದರೆ ತಪ್ಪು, ಕಂಗನಾ ಮಾಡಿದರೆ ಸರಿಯೇ? ನೆಟ್ಟಿಗರ ಪ್ರಶ್ನೆ

ಇದಾದ ಬಳಿಕ, ಕಾವೇರಿ ನೀರು ಹಂಚಿಕೆ ಕುರಿತು ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಾತನಾಡುತ್ತಿದ್ದಾಗ, ನೆರೆದಿದ್ದ ಜನರು ತ್ರಿಷಾ ಹೆಸರು ಹೇಳಿ ಘೋಷಣೆ ಕೂಗಿದರು. ಈ ವೇಳೆ ಉದಯನಿಧಿ ಸ್ಟಾಲಿನ್ ಅವರು ದ್ವಂದ್ವಾರ್ಥ ಹಾಗೂ ಅಶ್ಲೀಲ ಪದಬಳಕೆಯ ಕಮೆಂಟ್ ಮಾಡಿದ್ದರು ಎನ್ನಲಾಗಿತ್ತು.

ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿ, ನಟ ವಿಜಯ್ ಅವರ ಟಿವಿಕೆ ಪಕ್ಷ ಹಾಗೂ ಮಹಿಳಾ ಆಯೋಗವು ದೂರು ನೀಡಿದ್ದವು. ತದನಂತರ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿ, ಬಳಿಕ ಹೈಕೋರ್ಟ್ ಆದೇಶದಂತೆ ಬಿಡುಗಡೆ ಮಾಡಲಾಗಿತ್ತು. ಇದೀಗ ಕಂಗನಾ ರಣಾವತ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಮಹಿಳೆಯರ ಪರವಾಗಿ ದನಿ ಎತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us