ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಈ ದೇಶದಲ್ಲಿ ಬ್ಯಾನ್ ಬಿಸಿ
Emergency movie: ಕಂಗನಾ ರಣಾವತ್ ಅವರ ನಿರ್ದೇಶನ ಮತ್ತು ನಟನೆಯ "ಎಮರ್ಜೆನ್ಸಿ" ಚಿತ್ರವು ಜನವರಿ 17 ರಂದು ತೆರೆಗೆ ಬರಲಿದೆ. 1975 ರ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಈ ಚಿತ್ರಕ್ಕೆ ಬಾಂಗ್ಲಾದೇಶದಲ್ಲಿ ನಿಷೇಧ ವಿಧಿಸಲಾಗಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯನ್ನು ಚಿತ್ರಿಸಿರುವುದು ನಿಷೇಧಕ್ಕೆ ಕಾರಣ ಎನ್ನಲಾಗಿದೆ. ಚಿತ್ರದ ಬಿಡುಗಡೆಗೆ ಸಾಕಷ್ಟು ನಿರೀಕ್ಷೆ ಇದೆ ಆದರೆ ಈ ನಿಷೇಧವು ಚಿತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದು.
ನಟಿ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಜನವರಿ 17ರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ 70ರ ದಶಕದ ಕಥೆ ಹೊಂದಿದೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ. ಈಗ ಈ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಇದು ಚಿತ್ರಕ್ಕೆ ಕೊಂಚ ಹಿನ್ನಡೆ ತರಬಹುದು ಎನ್ನಲಾಗುತ್ತಿದೆ.
‘ಎಮರ್ಜೆನ್ಸಿ’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ವಿಳಂಬ ಆಯಿತು. ಸೆನ್ಸಾರ್ ಮಂಡಳಿಯವರು ಈ ಚಿತ್ರಕ್ಕೆ ಸರ್ಟಿಫಿಕೇಟ್ ನೀಡೋಕೆ ವಿಳಂಬ ಮಾಡಿದರು. ಆರಂಭದಲ್ಲಿ ಸಿನಿಮಾಗೆ ಪ್ರಮಾಣಪತ್ರ ಕೊಟ್ಟಿರಲಿಲ್ಲ. ಕೊನೆಗೆ ಬದಲಾವಣೆಗೆ ಒಪ್ಪಿಕೊಂಡ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಯಿತು. ಈ ಸಿನಿಮಾದಿಂದ ನಿರ್ಮಾಪಕಿ ಆಗಿ, ನಿರ್ದೇಶಕಿ ಆಗಿ ಕಂಗನಾ ಸುಸ್ತಾಗಿದ್ದಾರೆ. ಈಗ ಚಿತ್ರಕ್ಕೆ ಬಾಂಗ್ಲಾದೇಶದಲ್ಲಿ ಬ್ಯಾನ್ ಬಿಸಿ ತಟ್ಟಿದೆ.
ಕಾರಣ ಏನು?
ಬಾಂಗ್ಲಾದೇಶದಲ್ಲಿ ಎಮರ್ಜೆನ್ಸಿ ಸ್ಕ್ರೀನಿಂಗ್ ಅನ್ನು ನಿಲ್ಲಿಸುವ ನಿರ್ಧಾರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಸ್ತುತ ಹದಗೆಟ್ಟ ಸಂಬಂಧಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ. ಅಲ್ಲದೆ, 1975ರಲ್ಲಿ ನಡೆದ ಅಂದಿನ ಬಾಂಗ್ಲಾ ಪ್ರಧಾನಿ ಶೇಖ್ ರೆಹಮಾನ್ ಹತ್ಯೆ ಕುರಿತು ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಸಿನಿಮಾಗೆ ಅಲ್ಲಿ ಬ್ಯಾನ್ ಬಿಸಿ ತಟ್ಟಿದೆ.
ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಶೇಖ್ ಮುಜಿಬಿರ್ ರೆಹಮಾನ್. ಬಾಂಗ್ಲಾದೇಶದ ಉಗ್ರಗಾಮಿಗಳ ಗುಂಪಿನಿಂದ ಅವರ ಹತ್ಯೆ ಆಗಿದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಬ್ಯಾನ್ಗೆ ಪ್ರಮುಖ ಕಾರಣ ಆಗಿದೆ.
ಕಂಗನಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಇಂದಿರಾ ಗಾಂಧಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ಅದ್ಭುತವಾಗಿದೆ ಎಂದು ನಿರೀಕ್ಷಿಸಲಾಗಿದೆ. ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಸತಿಶ್ ಕೌಶಿಕ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚತ್ರ ಜನವರಿ 17ರಂದು ತೆರೆಗೆ ಬರುತ್ತಿದೆ. ಈ ಚಿತ್ರ ವಿವಾದ ಸೃಷ್ಟಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ