ಕರಣ್ ಜೋಹರ್ ಅವರ (Karan Johar) ಬರ್ತ್ಡೇ ಪಾರ್ಟಿಗೆ ಆಗಮಿಸಿದ 55ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಕೊವಿಡ್ ಅಂಟಿದೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಅದ್ದೂರಿ ಪಾರ್ಟಿ ಬಗ್ಗೆ ಅನೇಕ ವರದಿಗಳು ಬಿತ್ತರಗೊಂಡವು. ಅದ್ದೂರಿ ಪಾರ್ಟಿ ಕೊವಿಡ್ ಹಾಟ್ಸ್ಪಾಟ್ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿದವು. ಎಲ್ಲಾ ಸೆಲೆಬ್ರಿಟಿಗಳಿಗೆ ಪಾರ್ಟಿ ಕೊಟ್ಟಿದ್ದು ಅಲ್ಲದೆ, ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಂದ ಬಂದ ಟೀಕೆಯನ್ನು ಕರಣ್ ಜೋಹರ್ ಸ್ವೀಕರಿಸಬೇಕಾಯಿತು. ಈ ಬಗ್ಗೆ ಕರಣ್ ಜೋಹರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನನ್ನನ್ನೇಕೆ ದೂಷಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕರಣ್ ಅವರು ಈ ಬಾರಿ 50ನೇ ವರ್ಷಕ್ಕೆ ಕಾಲಿಟ್ಟರು. ಹೀಗಾಗಿ ಬರ್ತ್ಡೇ ಪಾರ್ಟಿ ಜೋರಾಗಿಯೇ ಇತ್ತು. ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಶಾರುಖ್ ಖಾನ್, ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಮೊದಲಾದವರು ಭಾಗಿ ಆಗಿದ್ದರು. ಪಾರ್ಟಿ ಮುಗಿದ ಕೆಲವೇ ದಿನಗಳಲ್ಲಿ ಕತ್ರಿನಾ ಹಾಗೂ ಶಾರುಖ್ಗೆ ಕೊವಿಡ್ ಪಾಸಿಟಿವ್ ಆಯಿತು. ಇವರಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳಿಗೆ ಕೊವಿಡ್ ಆಗಿತ್ತು ಎಂದು ವರದಿಗಳು ಹೇಳಿವೆ. ಇದನ್ನು ಕೆಲವರು ‘ಕರಣ್ ಜೋಹರ್ ಪಾರ್ಟಿ ಮಹಿಮೆ’ ಎಂದು ಲೇವಡಿ ಮಾಡಿದರು. ಈ ವಿಚಾರ ಕರಣ್ಗೆ ಬೇಸರ ತರಿಸಿದೆ.
‘ಒಂದು ವಾರದಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತಿರುತ್ತವೆ. ಯಾರಿಗೆ ಎಲ್ಲಿ ಕೊವಿಡ್ ಅಂಟಿದೆ ಅಂತ ಹೇಗೆ ಹೇಳುವುದು?ಪಾರ್ಟಿ ಮಾತ್ರ ಅಲ್ಲ, ಮದುವೆಗಳಿದ್ದವು, ಅನೇಕ ಕಾರ್ಯಕ್ರಮಗಳಿದ್ದವು, ಶೂಟಿಂಗ್ ಇತ್ತು. ನನ್ನನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಎಲ್ಲವೂ ನನಗೆ ಏಕೆ ಬರುತ್ತದೆ? ಕೊವಿಡ್ ಹರಡಿದ್ದಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಇದಕ್ಕೆ ಪೂರ್ಣವಿರಾಮ ಇಡಲು ಬಯಸುತ್ತೇನೆ. ಅದು ಆಗಿದ್ದು ನನ್ನಿಂದ ಅಲ್ಲ. ಈ ಕೊವಿಡ್ ಆರಂಭಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ ಕರಣ್.
ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್; ಶಾರುಖ್, ಕತ್ರಿನಾಗೆ ಕೊರೊನಾ ಪಾಸಿಟಿವ್
‘ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ಪಾರ್ಟಿ ಆಯೋಜನೆ ಮಾಡುವುದು ಆದಿತ್ಯ ಚೋಪ್ರಾ ಅವರ ಐಡಿಯಾ ಆಗಿತ್ತು. ನನ್ನ ತಂಡ ಅಲ್ಲಿ ಪಾರ್ಟಿ ಆಯೋಜನೆ ಮಾಡಿತು. ಕೊವಿಡ್ ಅಲ್ಲಿಂದ ಹರಡಿದೆಯೋ ಅಥವಾ ಹರಡಿಲ್ಲವೋ ಎನ್ನುವ ಬಗ್ಗೆ ನಾನು ಮಾತನಾಡುತ್ತಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುತ್ತಿದ್ದೇನೆ’ ಎಂಬುದು ಕರಣ್ ಜೋಹರ್ ಮಾತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 pm, Wed, 15 June 22