ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಕ್ಯಾಮೆರಾ ಮುಂದೆ ಬರಲು ಬಿಡುವುದಿಲ್ಲ. ತಮ್ಮ ಮಗಳ ಫೋಟೋ ತೆಗೆಯಬಾರದು ಎಂದು ಈಗಾಗಲೇ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಎಲ್ಲರಿಗೂ ಮನವಿ ಮಾಡಿರುವುದು ಗೊತ್ತಿದೆ. ಆದರೆ ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಸೈಫ್ ಅಲಿ ಖಾನ್ ದಂಪತಿ ಆ ರೀತಿ ಅಲ್ಲ. ಅವರ ಮಗ ತೈಮೂರ್ ಅಲಿ ಖಾನ್ (Taimur Ali Khan) ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕರೀನಾ ಅಥವಾ ಸೈಫ್ ಇದಕ್ಕೆ ಅಡ್ಡಿ ಪಡಿಸುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ತೈಮೂರ್ ಅಲಿ ಖಾನ್ನ ಅನೇಕ ವಿಡಿಯೋ ಮತ್ತು ಫೋಟೋಗಳು (Taimur Ali Khan Photo) ಆಗಾಗ ವೈರಲ್ ಆಗುತ್ತದೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಕಂಡು ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮಗನಿಗೆ ಒಳ್ಳೆಯ ಬುದ್ಧಿ ಕಲಿಸಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ತೈಮೂರ್ ಅಲಿ ಖಾನ್ ಮಾಡಿರುವ ತಪ್ಪು ಏನು? ನೆಟ್ಟಿಗರು ಯಾಕೆ ಈ ರೀತಿ ಕಮೆಂಟ್ ಮಾಡುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ತೈಮೂರ್ ಅಲಿ ಖಾನ್ ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಆತನ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವ ಸಲುವಾಗಿ ಮಾಧ್ಯಮದ ಕ್ಯಾಮೆರಾಗಳು ಹಪಹಪಿಸುತ್ತವೆ. ಇದು ಕೆಲವೊಮ್ಮೆ ತೈಮೂರ್ ಅಲಿ ಖಾನ್ಗೆ ಕಿರಿಕಿರಿ ಅನಿಸುವುದುಂಟು. ಈಗಲೂ ಹಾಗೆಯೇ ಆಗಿದೆ. ತನ್ನ ಫೋಟೋ ತೆಗೆಯಲು ಬಂದ ಪಾಪರಾಜಿಗಳಿಗೆ ತೈಮೂರ್ ಕೊಂಚ ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದಾನೆ. ‘ಕ್ಯಾಮೆರಾ ಆಫ್ ಮಾಡು’ ಎಂದು ಖಾರವಾಗಿ ನುಡಿದಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದೆ.
‘ತಂದೆ-ತಾಯಿ ಕಲಿಸಿದ ರೀತಿಯಲ್ಲೇ ಮಕ್ಕಳು ಮಾತನಾಡುತ್ತವೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ ‘ನಿಮ್ಮ ಮಗನಿಗೆ ಒಳ್ಳೆಯ ಬುದ್ಧಿ ಕಲಿಸಿ’ ಎಂದು ಕೆಲವು ನೆಟ್ಟಿಗರು ಬಿಟ್ಟಿ ಸಲಹೆ ನೀಡಿದ್ದನ್ನು ಒಂದಷ್ಟು ಮಂದಿ ವಿರೋಧಿಸಿದ್ದಾರೆ. ‘ಎಲ್ಲ ಮಕ್ಕಳು ಕೂಡ ಇದೇ ರೀತಿ ಮಾತನಾಡುವುದು. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಕೆಲವರು ತೈಮೂರ್ ಪರ ಬ್ಯಾಟ್ ಬೀಸಿದ್ದಾರೆ. ‘ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಖಾಸಗಿ ಜೀವನ ಇರುತ್ತದೆ. ಅವರ ಖಾಸಗಿತನಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳಬಾರದು’ ಎಂದು ಪಾಪರಾಜಿಗಳಿಗೆ ಕೆಲವರು ಚಾಟಿ ಬೀಸಿದ್ದಾರೆ.
ಒಂದಿಲ್ಲೊಂದು ಕಾರಣಕ್ಕೆ ಕರೀನಾ ಕಪೂರ್ ಖಾನ್ ಅವರು ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಖಾಸಗಿ ಆಭರಣ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ಅವರು ಹಣೆಗೆ ಬಿಂದಿ ಹಾಕಿಲ್ಲ ಎನ್ನುವ ಕಾರಣಕ್ಕೆ ಜನರು ಟ್ರೋಲ್ ಮಾಡಿದ್ದರು. ಅಲ್ಲದೇ ಆ ಜ್ಯುವೆಲ್ಲರಿ ಕಂಪನಿಯ ಆಭರಣಗಳನ್ನು ಬಹಿಷ್ಕರಿಸಿ ಎಂದು ಕೂಡ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ಟ್ಯಾಗ್ ಅಭಿಯಾನ ಆರಂಭಿಸಿದ್ದರು.
ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರು ಆಮಿರ್ ಖಾನ್ಗೆ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವರಿಗೆ 8 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಕೆಲವೆಡೆ ವರದಿ ಆಗಿದೆ. ಆಗಸ್ಟ್ 11ರಂದು ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
‘ತೈಮೂರ್ ಜತೆಗೂ ಅಕ್ಷಯ್ ಸಿನಿಮಾ ಮಾಡ್ತಾರೆ’; ಕರೀನಾ ಹೇಳಿದ ಈ ಮಾತು ನಿಜವೋ? ತಮಾಷೆಯೋ?
ಬಗೆಬಗೆಯ ಕಾಸ್ಟ್ಯೂಮ್ನಲ್ಲಿ ಮಿಂಚಿದ ಕರೀನಾ ಕಪೂರ್; ಇಲ್ಲಿವೆ ಕಲರ್ಫುಲ್ ಫೋಟೋಗಳು